HEALTH TIPS

2027ರ ಏಕದಿನ ವಿಶ್ವಕಪ್ | 24 ವರ್ಷಗಳ ನಂತರ ಆಫ್ರಿಕಾ ದೇಶಗಳ ಆತಿಥ್ಯ : 12 ಆತಿಥ್ಯ ನಗರಗಳ ಹೆಸರು ಬಹಿರಂಗಪಡಿಸಿದ ಐಸಿಸಿ

ದುಬೈ : ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)2027ರ ಆವೃತ್ತಿಯ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಆಯೋಜಿಸಲಿರುವ 12 ಕ್ರೀಡಾಂಗಣಗಳ ಹೆಸರನ್ನು ಗುರುವಾರ ಅಧಿಕೃತವಾಗಿ ಅನಾವರಣಗೊಳಿಸಿದೆ. ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ 50 ಓವರ್‌ಗಳ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದ್ದು, 24 ವರ್ಷಗಳ ನಂತರ ಆಫ್ರಿಕಾ ದೇಶದಲ್ಲಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ನಡೆಯುತ್ತಿದೆ. 


ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಭವ್ಯ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ. 'ಮೂರು ದೇಶಗಳು, ಒಂದು ಹೃದಯಬಡಿತ' ಎಂಬ ಟೂರ್ನಮೆಂಟ್‌ನ ಅಧಿಕೃತ ಬ್ರ್ಯಾಂಡ್ ಗುರುತನ್ನು ಐಸಿಸಿ ಬಹಿರಂಗಪಡಿಸಿದೆ. ಈ ಗುರುತು ಮೂರು ಆತಿಥೇಯ ದೇಶಗಳ ಆಶಾವಾದ, ವೈವಿಧ್ಯತೆ ಹಾಗೂ ಏಕತೆಯನ್ನು ಹಂಚಿಕೊಳ್ಳುವ ಮನೋಭಾವವನ್ನು ಸಂಕೇತಿಸುತ್ತದೆ.

14ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 57 ಪಂದ್ಯಗಳು ಇರಲಿದ್ದು, 14 ತಂಡಗಳು ಭಾಗವಹಿಸುತ್ತಿವೆ. ದಕ್ಷಿಣ ಆಫ್ರಿಕಾದ ಎಂಟು ನಗರಗಳು, ಝಿಂಬಾಬ್ವೆಯ ಮೂರು ಹಾಗೂ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್ ಆತಿಥೇಯ ತಾಣಗಳಾಗಿ ಆಯ್ಕೆಯಾಗಿವೆ.

ಆಫ್ರಿಕಾ ದೇಶಗಳು 2003ರ ನಂತರ ಮೊದಲ ಬಾರಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅತಿಥ್ಯ ವಹಿಸುತ್ತಿವೆ. 2003ರಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ಕೀನ್ಯ ಜಂಟಿಯಾಗಿ ಟೂರ್ನಿಯ ಆತಿಥ್ಯ ವಹಿಸಿದ್ದವು.

''24 ವರ್ಷಗಳ ನಂತರ ಈ ಪ್ರತಿಷ್ಠಿತ ಪಂದ್ಯಾವಳಿಯು ಆಫ್ರಿಕಾಕ್ಕೆ ಮರಳಿರುವುದು ಕ್ರಿಕೆಟ್‌ಗೆ ಒಂದು ಹೆಗ್ಗುರುತಿನ ಕ್ಷಣವಾಗಿದೆ. ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ದೇಶಗಳು ಮರೆಯಲಾಗದ ಸ್ಪರ್ಧಾವಳಿ ಆಯೋಜಿಸುವ ಕುರಿತು ನಮಗೆ ವಿಶ್ವಾಸವಿದೆ. ಈ ಪ್ರದೇಶವು ಅನನ್ಯ ಉತ್ಸಾಹ ಹಾಗೂ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸಲಿದೆ. ಇದು 2027ರ ವಿಶ್ವಕಪ್ ಹಾದಿಯಲ್ಲಿ ಒಂದು ರೋಮಾಂಚಕಾರಿ ಮೈಲಿಗಲ್ಲು. ಆತಿಥೇಯ ನಗರಗಳು ಹಾಗೂ ಟೂರ್ನಿಯ ಬ್ರ್ಯಾಂಡ್‌ನ ಅನಾವರಣ ವಿಶ್ವದಾದ್ಯಂತದ ಅಭಿಮಾನಿಗಳನ್ನು ಒಟ್ಟುಗೂಡಿಸುವ ಹಾಗೂ ಕ್ರೀಡೆಯ ಅತಿದೊಡ್ಡ ಜಾಗತಿಕ ಕಾರ್ಯಕ್ರಮಗಳಲ್ಲಿ ಒಂದಾಗುವ ನಿರೀಕ್ಷೆ ಇದೆ''ಎಂದು ಐಸಿಸಿ ಚೇರ‌್ಮನ್ ಜಯ ಶಾ ಹೇಳಿದ್ದಾರೆ.

2027ರ ಆವೃತ್ತಿಯು ಮೂರು ಹಂತದ ಸ್ಪರ್ಧಾವಳಿಯಾಗಿದೆ. ಮೂರು ಹಂತದ ಮಾದರಿಯು ಸ್ಪರ್ಧೆಯನ್ನು ಹೆಚ್ಚಿಸಲಿದೆ. 12ರಿಂದ 14ನೇ ರ್ಯಾಂಕಿನ ತಂಡಗಳು ಮೊದಲಿಗೆ ಸೂಪರ್ ಸೀರೀಸ್‌ನಲ್ಲಿ ಸ್ಪರ್ಧಿಸಲಿವೆ. ಇದರಲ್ಲಿ ಗೆಲ್ಲುವ ತಂಡ ಪಂದ್ಯಾವಳಿಯ ಪ್ರಧಾನ ಸುತ್ತಿಗೆ ತಲುಪಲಿದೆ.

ಮುಂದಿನ ಹಂತವು 12 ತಂಡಗಳನ್ನು ಹೊಂದಿರಲಿದೆ. ಇದನ್ನು ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು.ಪ್ರತಿ ತಂಡಗಳು ರೌಂಡ್ ರಾಬಿನ್‌ನಲ್ಲಿ ಆಡಲಿವೆ. ಪ್ರತೀ ಗುಂಪಿನ ಅಗ್ರ ಮೂರು ತಂಡಗಳು ಶ್ರೇಷ್ಠ ನಾಲ್ಕನೇ ತಂಡದೊಂದಿಗೆ ಸೂಪರ್-7ಕ್ಕೆ ತೇರ್ಗಡೆಯಾಗಲಿವೆ. ಸೂಪರ್-7ರಲ್ಲಿ 21 ಪಂದ್ಯಗಳು ನಡೆದ ನಂತರ ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್‌ಗೆ ಲಗ್ಗೆ ಇಡುತ್ತವೆ. ಫೈನಲ್ ಪಂದ್ಯವು ಚಾಂಪಿಯನ್ ತಂಡವನ್ನು ನಿರ್ಣಯಿಸಲಿದೆ.

2027ರ ಏಕದಿನ ವಿಶ್ವಕಪ್ ಆತಿಥ್ಯ ನಗರಗಳು

ದಕ್ಷಿಣ ಆಫ್ರಿಕಾ: ಜೋಹಾನ್ಸ್‌ಬರ್ಗ್, ಸೆಂಚೂರಿಯನ್, ಕೇಪ್‌ಟೌನ್, ಡರ್ಬನ್, ಕ್ವೆಬೆಹ್ರಾ, ಬ್ಲೊಮ್‌ಫೋಂಟೈನ್, ಪಾರ್ಲ್, ಕುಗೊಂಫೊ ಸಿಟಿ

ಝಿಂಬಾಬ್ವೆ: ಹರಾರೆ, ಬುಲಾವಯೊ, ವಿಕ್ಟೋರಿಯ ಫಾಲ್ಸ್

ನಮೀಬಿಯಾ: ವಿಂಡ್‌ಹೋಕ್. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries