ನವದೆಹಲಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 'ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಮಾಡುವ ಕೆಲಸವು, ಜಗತ್ತೇ ನಮ್ಮನ್ನು ವಿಭಿನ್ನ ರೀತಿಯಲ್ಲಿ ನೋಡುವಂತೆ ಮಾಡುತ್ತದೆ' ಎಂದು ಹುರಿದುಂಬಿಸಿದ್ದಾರೆ.
'ಇನ್ನು ಸಣ್ಣ ಸಣ್ಣ ಕನಸುಗಳು ಸಾಕಾಗುವುದಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಲು ಆರಂಭಿಸಬೇಕು. ದೊಡ್ಡ ಕನಸುಗಳು ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣವಾಗಬೇಕು ಎಂಬುದು ದೇಶದ ಕನಸಾಗಬೇಕು. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವು ಅಭಿವೃದ್ಧಿ ಸಾಧಿಸುವ ಸಂಕಲ್ಪ ಮಾಡಿದಾಗ, ಜಗತ್ತು ನಮ್ಮತ್ತ ತಿರುಗಿ ನೋಡುತ್ತದೆ' ಎಂದಿದ್ದಾರೆ.
ಕೆಂಪುಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ಇದೇ ಮೊದಲ ಬಾರಿಗೆ 'ವಂದೇ ಮಾತರಂ' ಘೋಷಣೆ ಮೊಳಗಿದೆ ಎಂದು ಹೆಮ್ಮೆಯಿಂದ ಪ್ರಸ್ತಾಪಿಸಿದ ಮೋದಿ, ರಾಷ್ಟ್ರಪತಿ ಮಹಾತ್ಮ ಗಾಂಧಿ ಸೇರಿದಂತೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ್ದಾರೆ.

