ವಾಷಿಂಗ್ಟನ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ದಿನಗಳ ಅಮೆರಿಕ ಭೇಟಿಯಲ್ಲಿದ್ದಾರೆ. ಅಲ್ಲಿ ಅವರು ಜಿ 20 ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಿಇಒಗಳು ಮತ್ತು ಉದ್ಯಮಿಗಳೊಂದಿಗೆ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.
ಅವರನ್ನು ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ, ಶಿಕಾಗೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸ್ವಾಗತಿಸಿದರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಭೇಟಿಯಲ್ಲಿ ಭಾರತದ ಹೂಡಿಕೆ ಅವಕಾಶಗಳು, ಆರ್ಥಿಕ ದೃಷ್ಟಿಕೋನ, ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚೆಗಳು ನಡೆಯಲಿವೆ ಎಂದು ಅದು ಹೇಳಿದೆ.
ಅಮೆರಿಕದ ಅಧ್ಯಕ್ಷತೆಯಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಜಿ 20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆ ನಡೆಯಲಿದೆ. ಸೀತಾರಾಮನ್ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದೆ.
ಮೂರು ದಿನಗಳ ಭೇಟಿಗಾಗಿ ಕೆನಡಾಕ್ಕೆ ಆಗಸ್ಟ್ 25ರಂದು ತೆರಳಿದ್ದ ಅವರು, ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.

