ಇಸ್ಲಾಮಾಬಾದ್: ಸಿಂಧೂ ನದಿ ನೀರು ಒಪ್ಪಂದದ ಅನ್ವಯ ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ನೀರನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ಪ್ರಾದೇಶಿಕ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಉಪ ಪ್ರಧಾನಿ ಇಶಾಕ್ ದಾರ್ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ವಿಚಾರ ಸಂಕಿರಣವೊಂದನ್ನು ಉದ್ದೇಶಿಸಿ ಮಾತನಾಡಿದ ಉಪ ಪ್ರಧಾನಿ ದಾರ್, ಈ ವಿಷಯ ಕೇವಲ ದ್ವಿಪಕ್ಷೀಯ ಸಂಬಂಧಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಒಪ್ಪಂದದ ಪಾವಿತ್ರ್ಯತೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವ ಬ್ಯಾಂಕ್‌ನ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿ ನೀರು ಒಪ್ಪಂದವಾಗಿದ್ದು, ಇದು ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದೆ. ಇದರಡಿ, ಪೂರ್ವದ ಮೂರು ನದಿಗಳ ನೀರನ್ನು ಪಾಕಿಸ್ತಾನಕ್ಕೆ ಮತ್ತು ಪಶ್ಚಿಮದ ಮೂರು ನದಿಗಳ ನೀರನ್ನು ಭಾರತಕ್ಕೆ ಹಂಚಿಕೆ ಮಾಡಲಾಗಿದೆ.
ಕಳೆದ ವರ್ಷ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತವು ಈ ಒಪ್ಪಂದದ ಅನ್ವಯ ನೀರು ಹರಿಸುವುದನ್ನು ಸ್ಥಗಿತಗೊಳಿಸಿದೆ.
ಏಕಪಕ್ಷೀಯವಾಗಿ ಒಪ್ಪಂದವನ್ನು ಅಮಾನತುಗೊಳಿಸಲು ಅಥವಾ ತಾತ್ಕಾಲಿಕವಾಗಿ ತಡೆಹಿಡಿಯಲು ಒಪ್ಪಂದದಲ್ಲಿ ಅವಕಾಶ ಇಲ್ಲ ಎಂದು ದಾರ್ ಹೇಳಿದ್ದಾರೆ.
ಈ ವಿಷಯವು ದ್ವಿಪಕ್ಷೀಯ ಸಂಬಂಧಗಳ ವ್ಯಾಪ್ತಿ ಮೀರಿದ್ದು, ಒಪ್ಪಂದದ ಪಾವಿತ್ರ್ಯತೆ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಮೇಲಿನ ವಿಶ್ವಾಸಕ್ಕೆ ಸಂಬಂಧಿಸಿದ್ದಾಗಿದೆ ಎಂದು ವಿದೇಶಾಂಗ ಸಚಿವರೂ ಆಗಿರುವ ದಾರ್ ಹೇಳಿದ್ದಾರೆ.

