ನವದೆಹಲಿ (PTI): ದೇಶದ ದೂರಸಂಪರ್ಕ ವಲಯದ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಿದೆ.
ಜಿಯೊ ಪ್ಲಾಟ್‌ಫಾರ್ಮ್ಸ್ ಕಂಪನಿಯು ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ಆಗಿದೆ.
ಜಿಯೊ ಕಂಪನಿಯು ಸಾರ್ವಜನಿಕ ರಿಗೆ ಷೇರು ಮಾರಾಟ (ಐಪಿಒ) ಮಾಡುವ ಮೂಲಕ ₹37,700 ಕೋಟಿ (4 ಬಿಲಿಯನ್ ಡಾಲರ್) ಬಂಡವಾಳ ಸಂಗ್ರಹಿಸಲಿದ್ದು, ಇದು ದೇಶದ ಅತಿ ದೊಡ್ಡ ಐಪಿಒ ಆಗಲಿದೆ ಎಂದು ಮೂಲಗಳು ತಿಳಿಸಿವೆ.
2024ರ ಅಕ್ಟೋಬರ್‌ನಲ್ಲಿಹುಂಡೈ ಮೋಟರ್ ಇಂಡಿಯಾ ಕಂಪನಿ ₹27,870 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಇದು ಈವರೆಗೆ ಅತಿ ಹೆಚ್ಚು ಬಂಡವಾಳ ಸಂಗ್ರಹಿಸಿದ ಕಂಪನಿಯಾಗಿದೆ.
ಜೂನ್‌ನಲ್ಲಿ ಕಂಪನಿಯು ಪ್ರಸ್ತಾವಿತ ಐಪಿಒಗೆ ಸಂಬಂಧಿಸಿದ ಕರಡು ದಾಖಲೆಗಳನ್ನು (ಡಿಎಚ್‌ಆರ್‌ಪಿ) ಸೆಬಿಗೆ ಸಲ್ಲಿಸಿತ್ತು. ಇದೀಗ ಸೆಬಿ ಒಪ್ಪಿಗೆ ನೀಡಿದೆ. ಐಪಿಒ ಪ್ರಕ್ರಿಯೆಗೆ ಸೆಬಿ ಒಪ್ಪಿಗೆ ಕಡ್ಡಾಯವಾಗಿದೆ. ಆ ಬಳಿಕ ಕಂಪನಿಯು ಷೇರುಗಳನ್ನು ಮಾರಾಟ ಮಾಡಲು ಸಿದ್ಧತೆ ಕೈಗೊಳ್ಳಬಹುದಾಗಿದೆ.
ಕರಡು ದಾಖಲೆಯ ಪ್ರಕಾರ, ಕಂಪನಿಯು 27 ಕೋಟಿವರೆಗೆ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಯೋಜಿಸಿದೆ. ಇದು ಕಂಪನಿಯ ಒಟ್ಟು ಷೇರುಗಳ ಪೈಕಿ ಶೇ 2.9ರಷ್ಟು ಮಾತ್ರ. ಪ್ರತಿ ಷೇರಿನ ಮುಖಬೆಲೆ ₹10 ಇರಲಿದೆ ಎಂದು ತಿಳಿಸಿವೆ.
ರಾಷ್ಟ್ರೀಯ ಷೇರುವಿನಿಮಯ ಕೇಂದ್ರವು (ಎನ್‌ಎಸ್‌ಇ) ಸಂಗ್ರಹಿಸಲು ಉದ್ದೇಶಿಸಿರುವ ₹30 ಸಾವಿರ ಕೋಟಿ ಬಂಡವಾಳಕ್ಕಿಂತಲೂ, ಜಿಯೊ ಸಂಗ್ರಹವು ಅತಿದೊಡ್ಡದಾಗಿದೆ. ಸಂಗ್ರಹವಾಗುವ ಈ ಬಂಡವಾಳವನ್ನು ಕಂಪನಿಯು ನಿರ್ದಿಷ್ಟ ಮೊತ್ತವನ್ನು ಸಾಲದ ಮರುಪಾವತಿಗೆ ಮತ್ತು ಕಂಪ ನಿಯ ಬೆಳವಣಿಗೆಗೆ ಬಳಸಿಕೊಳ್ಳಲಿದೆ.
ಜಿಯೊದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇ 66.43ರಷ್ಟು ಪಾಲನ್ನು ಹೊಂದಿದೆ. ಅಲ್ಲದೆ, ಜಿಯೊ ಪ್ಲಾಟ್‌ಫಾರ್ಮ್ ಈಗಾಗಲೇ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಮತ್ತು ಖಾಸಗಿ ಷೇರು ಹೂಡಿಕೆದಾರರನ್ನು ಆಕರ್ಷಿಸಿವೆ. ಮೆಟಾ ಮತ್ತು ಗೂಗಲ್ ಕಂಪನಿಯು ಒಟ್ಟು ಶೇ 17.71ರಷ್ಟು ಷೇರು ಹೊಂದಿದ್ದರೆ, ಉಳಿದ ಷೇರನ್ನು ಇತರೆ ಹೂಡಿಕೆದಾರರು ಹೊಂದಿದ್ದಾರೆ.
2020ರಲ್ಲಿ ಮೆಟಾ ಕಂಪನಿಯು ಜಿಯೊದಲ್ಲಿ ₹43,574 ಕೋಟಿ ಮತ್ತುಗೂಗಲ್ ಕಂಪನಿಯು ₹33,737 ಕೋಟಿ ಹೂಡಿಕೆ ಮಾಡುವ ಮೂಲಕಕ್ರಮವಾಗಿ ಶೇ 9.99 ಮತ್ತು ಶೇ 7.73ರಷ್ಟು ಷೇರುಗಳನ್ನು ಖರೀದಿಸಿದ್ದವು.
2008ರ ಬಳಿಕ ರಿಲಯನ್ಸ್ ಸಮೂಹದ ಮೊದಲ ಐಪಿಒ ಇದಾಗಿದೆ. ಜೂನ್ ಅಂತ್ಯದ ವೇಳೆಗೆ ಜಿಯೊ 53.3 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಹೆಚ್ಚು ಚಂದಾದಾರರನ್ನು ಹೊಂದಿದ ದೇಶದ ದೂರಸಂಪರ್ಕ ವಲಯದ ಅತಿದೊಡ್ಡ ಕಂಪನಿಯಾಗಿದೆ.

