ಕಾಸರಗೋಡು: ಕಾಞಂಗಾಡ್ ಗುರುಪುರಂ ಮಹಾವಿಷ್ಣು ದೇವಾಲಯದ ಭಕ್ತರ ಮತ್ತೊಂದು ಆಸೆ ಈಡೇರುತ್ತಿದೆ. ಇನ್ನು ಗಜವೀರ ದೇವಾಲಯದ ಉತ್ಸವ ಮತ್ತು ಇತರ ಪ್ರಮುಖ ಸಮಾರಂಭಗಳಲ್ಲಿ ಉಪಸ್ಥಿತರಿರುತ್ತಾನೆ. ದೇವಾಲಯ ಸಮಿತಿಯ ಅಧಿಕಾರಿಗಳು 'ಗುರುಪುರಂ ಅರ್ಜುನ' ರೋಬೋಟಿಕ್ ಆನೆಯನ್ನು ಆ.25 ರಂದು ಬೆಳಿಗ್ಗೆ 10 ಗಂಟೆಗೆ ದೇವಾಲಯದೊಳಗೆ ಮೆರವಣಿಗೆ ಮೂಲಕ ತಂದು ಚಾಲನೆ ನಿಡಲಾಗುವುದೆಂದು ತಿಳಿಸಿದ್ದಾರೆ. ಮೊದಲ ನೋಟದಲ್ಲಿ, ಇದು ಜೀವಂತ ಆನೆಯಂತೆ ಕಾಣಿಸುತ್ತದೆ ಮತ್ತು 800 ಕಿಲೋಗ್ರಾಂಗಳಷ್ಟು ತೂಕದ 'ಗುರುಪುರಂ ಅರ್ಜುನ'ದ ಮೇಲೇರಿ ನಾಲ್ಕು ಮಂದಿ ಕುಳಿತುಕೊಳ್ಳಬಹುದು.
ಇದು ಜೋಡಿಸಲಾದ ಚಕ್ರದ ಸಹಾಯದಿಂದ ಚಲಿಸುತ್ತದೆ. ಇದರ ಕಿವಿಗಳು ಚಲಿಸುತ್ತದೆ ಮತ್ತು ಜೀವಂತ ಆನೆಯಂತೆ ತನ್ನ ಸೊಂಡಿಲನ್ನು ಎತ್ತುತ್ತದೆ. ಪ್ರಾಣಿಗಳ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡುವ 'ಪೆಟ್ ಇಂಡಿಯಾ' ಎಂಬ ದತ್ತಿ ಸಂಸ್ಥೆ ಮತ್ತು ನಟಿ ರಿಚಾ ಚಡ್ಡಾ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಈ ರೋಬೋಟಿಕ್ ಆನೆಯನ್ನು ದೇವಾಲಯಕ್ಕೆ ದಾನ ಮಾಡಲಿದ್ದಾರೆ. ದೇವಾಲಯದ ತಂತ್ರಿ ಇರವಿಲ್ ಕೃಷ್ಣದಾಸ್ ವಾಜವಾನರ್ ಆನೆಗೆ ಹೆಸರಿಡಲಿದ್ದಾರೆ.
ರಾಜ್ಯ ಕೃಷಿ ಇಲಾಖೆಯಿಂದ 'ಕರ್ಷಕ ತಿಲಕಂ' ಪ್ರಶಸ್ತಿ ಗೆದ್ದ ಸಾವಿತ್ರಿ ಕೆ. ಮೀಂಗೋತ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಜಿಲ್ಲೆಯ ಪ್ರಸಿದ್ಧ ಉತ್ಸವ ನಾಯಕರ ನೇತೃತ್ವದಲ್ಲಿ ಚೆಂಡಮೇಳವೂ ನಡೆಯಲಿದೆ.
ಕಾಞಂಗಾಡ್-ಪಾಣತ್ತೂರು ರಾಜ್ಯ ಹೆದ್ದಾರಿಯಲ್ಲಿರುವ ಈ ದೇವಾಲಯವು ಪ್ರಸ್ತುತ ನವೀಕರಣಗೊಳ್ಳುತ್ತಿದೆ. 1,500 ಜನರಿಗೆ ಸ್ಥಳಾವಕಾಶ ಕಲ್ಪಿಸಬಹುದಾದ ದೇವಾಲಯದ ಸಭಾಂಗಣದ ನಿರ್ಮಾಣವು ಅಂತಿಮ ಹಂತದಲ್ಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ದೇವಾಲಯದ ಗೋಪುರ ಮತ್ತು ನೆಲ ಹಾಸಿಗೆ ಗ್ರಾನೈಟ್ ಅಳವಡಿಕೆ ಪೂರ್ಣಗೊಂಡಿದೆ. ಉತ್ರಾಡಂ ದಿನದಂದು ಬೆಳಿಗ್ಗೆ ಸಮರ್ಪಣೆ ನಡೆಯಲಿದೆ.



