ಪ್ರಯಾಗ್‌ರಾಜ್: ಇಸ್ಲಾಂಗೆ ಮತಾಂತರಗೊಂಡಿದ್ದ ಕಾರಣಕ್ಕೆ ಇಬ್ಬರು ಸಹೋದರಿಯರನ್ನು ಅಕ್ರಮವಾಗಿ ಕೂಡಿ ಹಾಕಿದ್ದಕ್ಕಾಗಿ ಅವರ ತಂದೆ ಮತ್ತು ಉತ್ತರ ಪ್ರದೇಶ ಸರ್ಕಾರವು ಜಂಟಿಯಾಗಿ ₹25 ಲಕ್ಷ ಪರಿಹಾರ ನೀಡಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ದಿವ್ಯಾ ಭಾಟಿಯಾ ಅಲಿಯಾಸ್ ಜೊಯಾ ದಿಯಾ ಭಾಟಿಯಾ(20) ಮತ್ತು ಅಂಶು ಭಾಟಿಯಾಸ್ ಆಲಿಯಾ ಅಮೀನಾ ಅಂಶು ಭಾಟಿಯಾ(35) ಅವರ ಪರವಾಗಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಈ ಆದೇಶ ನೀಡಿದ್ದಾರೆ.
ನಾವು ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಮಹಿಳೆಯರ ಹೇಳಿಕೆ ದಾಖಲಿಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಂತ ಇಚ್ಛೆಯಿಂದ ಮತಾಂತರಗೊಂಡಿದ್ದಾಗಿಯೂ ಅವರು ತಿಳಿಸಿದ್ದಾರೆ.
ತಮ್ಮ ಮತಾಂತರ ನಿರ್ಧಾರವು ಒತ್ತಡ, ವಂಚನೆ, ಬಲವಂತ, ಅತಿಯಾದ ಪ್ರಭಾವ, ಪ್ರಚೋದನೆ ಅಥವಾ ಆಮಿಷದಿಂದ ಆಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಮತಾಂತರವು ಅವರ ಇಚ್ಛೆಗೆ ವಿರುದ್ಧವಾಗಿ ಆಗಿದೆ ಎಂಬ ಕೋಪದಲ್ಲಿ ತಂದೆ ನಮ್ಮನ್ನು ಪೂರ್ವಜರ ನಿವಾಸದಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇಬ್ಬರೂ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ ನಂತರ, ಅವರ ಪ್ರತಿಕ್ರಿಯೆಗಳು ಸ್ವಯಂಪ್ರೇರಿತ, ಸುಸಂಬದ್ಧವಾಗಿದ್ದವು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಅವರಲ್ಲಿ ಯಾರಾದರೂ ಬಲವಂತ, ಭಯ, ಆಮಿಷ ಅಥವಾ ಅನಗತ್ಯ ಪ್ರಭಾವಕ್ಕೆ ಒಳಗಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಸೂಚಿಸುವಂತಹ ಯಾವುದೇ ಅಂಶ ಕಂಡುಬರಲಿಲ್ಲ ಎಂದೂ ಹೇಳಿದೆ.
ಇಬ್ಬರೂ ವಯಸ್ಕರಾಗಿರುವುದರಿಂದ ತಮ್ಮ ಜೀವನದ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಅವರಿಗಿದೆ ಎಂದೂ ನ್ಯಾಯಾಲಯ ಹೇಳಿದೆ.
ಸಂವಿಧಾನದ 21ನೇ ವಿಧಿ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ 25ನೇ ವಿಧಿಯ (ಧಾರ್ಮಿಕ ಸ್ವಾತಂತ್ರ್ಯ) ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ವೈಯಕ್ತಿಕ ಸ್ವಾಯತ್ತತೆ, ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಇಂತಹ ಆಯ್ಕೆಗೆ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನಬದ್ಧವಾಗಿ ಅನುಮತಿಸಲಾದ ನಿರ್ಬಂಧಗಳು ಮತ್ತು ಕಾನೂನಿನ ಅಧಿಕಾರದ ವ್ಯಾಪ್ತಿಯನ್ನು ಹೊರತುಪಡಿಸಿ, ಇಂತಹ ಅತ್ಯಂತ ವೈಯಕ್ತಿಕ ನಿರ್ಧಾರಗಳಲ್ಲಿ ರಾಜ್ಯ ಸರ್ಕಾರವಾಗಲಿ ಅಥವಾ ಕುಟುಂಬವಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯವು ಇದೇ ವೇಳೆ ತಿಳಿಸಿದೆ.

