ಭೋಪಾಲ್: ದೇಶದಲ್ಲೇ ಅತಿ ಹೆಚ್ಚು ಹುಲಿ ಮತ್ತು ಚಿರತೆಗಳನ್ನು ಹೊಂದಿರುವ 'ವನ್ಯಜೀವಿಗಳ ಸ್ವರ್ಗ' ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದಲ್ಲಿ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಈ ವರ್ಷ ಅಧಿಕವಾಗಿದೆ.
ಎಂಟು ತಿಂಗಳಲ್ಲೇ ವನ್ಯಜೀವಿಗಳ ದಾಳಿಗೆ ಕನಿಷ್ಠ 50 ಜನರು ಪ್ರಾಣ ಕಳೆದುಕೊಂಡಿದ್ದರೆ, ಇದೇ ಅವಧಿಯಲ್ಲಿ 45ಕ್ಕೂ ಹೆಚ್ಚು ಹುಲಿಗಳು ಸಹ ಸಾವನ್ನಪ್ಪಿವೆ.
ಆದರೆ ಹುಲಿಗಳ ಸಾವಿಗೆ ನಿಖರವಾದ ಕಾರಣಗಳು ಸಿಕ್ಕಿಲ್ಲ ಎಂದು ವರದಿಯಾಗಿದೆ.
ಮಧ್ಯಪ್ರದೇಶ ಅರಣ್ಯ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರಾಣಿಗಳ ದಾಳಿಯಿಂದ ಮೃತಪಟ್ಟ 50 ಜನರ ಪೈಕಿ 22 ಜನರು ಹುಲಿ ದಾಳಿಯಿಂದ ಅಸುನೀಗಿದ್ದಾರೆ. ಕಾಡು ಹಂದಿ ದಾಳಿಗೆ 8, ಆನೆ ದಾಳಿಗೆ 7, ಕರಡಿ ದಾಳಿಗೆ 4 ಹಾಗೂ ಚಿರತೆ ದಾಳಿಗೆ ಒಬ್ಬರು ಬಲಿಯಾಗಿದ್ದಾರೆ. ಮೃತರಲ್ಲಿ 16 ಬಾಲಕಿಯರು ಮತ್ತು ಮಹಿಳೆಯರಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ 30 ಜನರು ಮೃತಪಟ್ಟಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಗಿರಿಜನರು ಹಾಗೂ ಬುಡಕಟ್ಟು ಸಮುದಾಯದವರು ಹೂವು ಮತ್ತು ಎಲೆಗಳನ್ನು ಸಂಗ್ರಹಿಸಲು ಅರಣ್ಯಕ್ಕೆ ತೆರಳುವ ಸಮಯದಲ್ಲೇ ಈ ದಾಳಿಗಳು ಹೆಚ್ಚಾಗಿ ನಡೆದಿವೆ.
'ದಿ ಜಂಗಲ್ ಬುಕ್' ಖ್ಯಾತಿಯ ಸಿವೋನಿ ಕಾಡು ಸೇರಿದಂತೆ ಮಹಾಕೌಶಲ್ ಅರಣ್ಯ, ಬಾಂದವ್‌ಗಢ ಹುಲಿ ಸಂರಕ್ಷಿತ ಪ್ರದೇಶ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚು ದಾಳಿಗಳು ನಡೆದಿವೆ.
2020-25ರ ಅವಧಿಯಲ್ಲಿ ರಾಜ್ಯದಲ್ಲಿ ವನ್ಯಜೀವಿಗಳ ದಾಳಿಗೆ ಒಟ್ಟು 406 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಅವಧಿಯಲ್ಲಿ 5,804 ಜನರು ಗಾಯಗೊಂಡಿದ್ದು, 72,627 ಜಾನುವಾರುಗಳು ವನ್ಯಜೀವಿಗಳಿಗೆ ಬಲಿಯಾಗಿವೆ ಎಂದು ಅರಣ್ಯ ಇಲಾಖೆಯ ದತ್ತಾಂಶಗಳು ಹೇಳುತ್ತವೆ.

