ನವದೆಹಲಿ: ಎರಡು ತಿಂಗಳ ಹಿಂದಷ್ಟೇ ನಿವೃತ್ತರಾದ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನೇತೃತ್ವದಲ್ಲಿ ದೇಶೀಯವಾಗಿ ನಿರ್ಮಿಸಲಾಗುತ್ತಿರುವ ತೇಜಸ್ ಯುದ್ಧ ವಿಮಾನ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಭಾರತದಲ್ಲೇ ತಯಾರಾಗುತ್ತಿರುವ 'ತೇಜಸ್ ಮಾರ್ಕ್-2' ಯುದ್ಧ ವಿಮಾನವು 2030ರ ದಶಕದ ಮಧ್ಯಭಾಗದಲ್ಲಿ ಗಣನೀಯ ಸಂಖ್ಯೆಯಲ್ಲಿ ಸೇವೆಗೆ ಸೇರ್ಪಡೆಯಾಗುವ ವೇಳೆಗೆ, ಮುಂಚೂಣಿ ಕಾರ್ಯಾಚರಣೆಗಳಿಗೆ ಪ್ರಸ್ತುತವಾಗದೇ ಇರಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚೀನಾ 6ನೇ ಪೀಳಿಗೆಯ ಜೆಟ್‌ಗಳತ್ತ ಸಾಗುತ್ತಿರುವಾಗ ಮತ್ತು ಪಾಕಿಸ್ತಾನವು 5ನೇ ಪೀಳಿಗೆಯ ಜೆಟ್‌ಗಳನ್ನು ಹೊಂದುವ ಆಲೋಚನೆಯಲ್ಲಿದೆ. ಆದರೆ, 2035ರ ವೇಳೆಗೆ ಭಾರತವು 4ನೇ ಪೀಳಿಗೆಯ ವಿಮಾನಗಳನ್ನು ಹೊಂದುವುದರಲ್ಲಿ ಅರ್ಥವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಪೂರ್, 'ಹೌದು, ಕಾರ್ಯಾಚರಣೆ ದೃಷ್ಟಿಯಿಂದ ಇದು ಪ್ರಸ್ತುತವಾಗದಿರಬಹುದು' ಎಂದಿದ್ದಾರೆ.
ಅಮೆರಿಕದ F-22 ಅಥವಾ ಚೀನಾದ J-20ನಂತಹ ಐದನೇ ಪೀಳಿಗೆಯ ಯುದ್ಧ ವಿಮಾನಗಳು ರೇಡಾರ್‌ಗೆ ಸುಲಭವಾಗಿ ಸಿಗದಂತೆ ಗುರಿ ತಲುಪುವ 'ಸ್ಟೆಲ್ತ್' ತಂತ್ರಜ್ಞಾನ, ಸೆನ್ಸಾರ್ ವ್ಯವಸ್ಥೆ ಮತ್ತು ಆಂತರಿಕ ಆಯುಧ ಸಂಗ್ರಹಣಾ ಸಾಮರ್ಥ್ಯ ಒಳಗೊಂಡಿರುತ್ತವೆ. ಚೀನಾದ J-36 ಮತ್ತು J-50ನಂತಹ ಆರನೇ ಪೀಳಿಗೆಯ ಯುದ್ಧ ವಿಮಾನಗಳೂ 'ಸ್ಟೆಲ್ತ್' ತಂತ್ರಜ್ಞಾನದ ತಡಿಪಾಯದ ಮೇಲೆಯೇ ನಿರ್ಮಾಣಗೊಂಡಿದ್ದು, ಡ್ರೋನ್ ವಿಂಗ್‌ಮೆನ್‌ಗಳೊಂದಿಗೆ ಎಐ ಚಾಲಿತ ಸ್ವಾಯತ್ತತೆ ಹೊಂದಿರುತ್ತವೆ. ಈ ವಿಮಾನಗಳು ನೆಟ್‌ವರ್ಕ್ಡ್ ನೋಡ್ ಆಗಿ ಕಾರ್ಯನಿರ್ವಹಿಸುವ 'ಸಿಸ್ಟಮ್ ಆಫ್ ಸಿಸ್ಟಮ್ಸ್' ವಿಧಾನವನ್ನು ಒಳಗೊಂಡಿರುತ್ತವೆ ಎಂದು ಕಪೂರ್ ಹೇಳಿದ್ದಾರೆ.
ಭಾರತವು ಪ್ರಸ್ತುತ ಐದನೇ ಅಥವಾ ಆರನೇ ಪೀಳಿಗೆಯ ಯಾವುದೇ ಜೆಟ್‌ಗಳನ್ನು ಹೊಂದಿಲ್ಲ. ಕೆಲವು ಅಂದಾಜಿನ ಪ್ರಕಾರ, ಚೀನಾ 2030ರ ವೇಳೆಗೆ ಐದನೇ ಪೀಳಿಗೆಯ 500 J-20 ಯುದ್ಧ ವಿಮಾನಗಳನ್ನು ಸೇವೆಗೆ ನಿಯೋಜಿಸುವ ಇರಾದೆ ಹೊಂದಿದೆ. ಆದರೆ, ತೇಜಸ್ ಮಾರ್ಕ್-2 ವರ್ಗದ ನಾಲ್ಕನೇ ಪೀಳಿಗೆಯ ಯುದ್ಧ ವಿಮಾನಗಳು ಪ್ರಮುಖವಲ್ಲದ ಪಾತ್ರ ವಹಿಸಬಹುದು ಎಂದೂ ಅವರು ವಿವರಿಸಿದ್ದಾರೆ.
'ನಾವು ನಿರ್ದಿಷ್ಟ ಸಂಖ್ಯೆಯ 5ನೇ ಮತ್ತು 6ನೇ ಪೀಳಿಗೆಯ ಯುದ್ಧ ವಿಮಾನಗಳನ್ನು ಹೊಂದಿರಬಹುದು. ಆದರೆ, ದೇಶದ ಗಾತ್ರವನ್ನು ಪರಿಗಣಿಸಿದರೆ, ಅವುಗಳನ್ನು ಎಲ್ಲೆಡೆ ನಿಯೋಜಿಸಲು ಸಾಧ್ಯವಿಲ್ಲ. ಆದ್ದರಿಂದ ದೇಶದ ಬೇರೆ ಭಾಗಗಳಿಗೆ ತೇಜಸ್ ಮಾರ್ಕ್-2 ವಿಮಾನಗಳನ್ನೇ ನಿಯೋಜಿಸಬೇಕಾಗುತ್ತದೆ' ಎಂದಿದ್ದಾರೆ.
ತೇಜಸ್ Mk1A ಆವೃತ್ತಿಯ ವಿಮಾನಗಳು ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿಲ್ಲದಿರುವುದು 'ಅತ್ಯಂತ ಕಳವಳಕಾರಿ ಸಂಗತಿ' ಎಂದಿರುವ ಕಪೂರ್, ಎಚ್‌ಎಎಲ್ ನಡೆಯನ್ನು ಟೀಕಿಸಿದ್ದಾರೆ.
'ಸಂಸ್ಥೆಯೊಂದು (ಎಚ್‌ಎಎಲ್) ಯಾವುದೋ ಒಂದು ಕಾರಣ ಅಥವಾ ನೆಪವನ್ನು ಹೇಳಿಕೊಂಡೇ ಬರುತ್ತಿದೆ. ಹಲವು ವರ್ಷಗಳ ಹಿಂದೆ ನಿರ್ದಿಷ್ಟ ಸಾಮರ್ಥ್ಯಗಳೊಂದಿಗೆ ನಮಗೆ ಭರವಸೆ ನೀಡಲಾಗಿದ್ದ ಯಂತ್ರವನ್ನು (ವಿಮಾನ) ನೀಡದೆ ನಿರಂತರವಾಗಿ ಮುಂದೂಡುತ್ತಿರುವುದು ಏಕೆ?, ಯಾರೋ... ಎಲ್ಲೋ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದಿದ್ದಕ್ಕಾಗಿ ನಾವು ಏಕೆ ಕಷ್ಟಪಡಬೇಕು' ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತದಲ್ಲೇ ತಯಾರಿಸಿದ ಯುದ್ಧ ವಿಮಾನಗಳ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು, 'ನಿಸ್ಸಂದೇಹವಾಗಿಯೂ ಸ್ವದೇಶಿ ನಿರ್ಮಿತ ವಿಮಾನಗಳೇ ಸೂಕ್ತ ಆಯ್ಕೆ. ಆದರೆ, ನಾವು ಇನ್ನೆಷ್ಟು ಕಾಲ ಕಾಯಬೇಕು' ಮರು ಪ್ರಶ್ನಿಸಿದ್ದಾರೆ.
ತೇಜಸ್ ಮೂಲಮಾದರಿಯು 2001ರಲ್ಲಿ ಹಾರಾಟ ನಡೆಸಿತ್ತು. ಭಾರತೀಯ ವಾಯುಪಡೆಯು (ಐಎಎಫ್) 40 ತೇಜಸ್ Mk.1 ಜೆಟ್‌ಗಳಿಗೆ ಆದೇಶ ನೀಡಿತ್ತು. 2021ರಲ್ಲಿ ₹46,000 ಕೋಟಿ ಮೊತ್ತದ ಒಪ್ಪಂದದಡಿ ಹೆಚ್ಚು ಸುಧಾರಿತ ತೇಜಸ್ Mk-1A ಆವೃತ್ತಿಯ 83 ವಿಮಾನಗಳಿಗೆ ಆದೇಶಿಸಿತ್ತು. ಪ್ರಸ್ತುತ, ಅಮೆರಿಕ ನಿರ್ಮಿತ ಜನರಲ್ ಎಲೆಕ್ಟ್ರಿಕ್ F404-IN20 ಎಂಜಿನ್‌ಗಳ ಪೂರೈಕೆಯು ಉತ್ಪಾದನಾ ವೇಗಕ್ಕೆ ತಕ್ಕಂತೆ ಇಲ್ಲದಿರುವುದರಿಂದ ಒಂದೇ ಒಂದು ತೇಜಸ್ Mk-1A ಸಹ ಐಎಎಫ್‌ಗೆ ಹಸ್ತಾಂತರವಾಗಿಲ್ಲ. ಈ ಮಧ್ಯಂತರ ಅವಧಿಯಲ್ಲಿ ಎಚ್‌ಎಎಲ್ ತನ್ನ ರೇಡಾರ್, ಏವಿಯಾನಿಕ್ಸ್ ಮತ್ತು ಆಯುಧ ವ್ಯವಸ್ಥೆಗಳ ಸಂಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ವರದಿಯಾಗಿದೆ.
2025ರ ಸೆಪ್ಟೆಂಬರ್ 25ರಂದು ₹62,370 ಕೋಟಿ ಒಪ್ಪಂದದಲ್ಲಿ ಮತ್ತಷ್ಟು 97 ತೇಜಸ್ Mk-1A ಜೆಟ್‌ಗಳಿಗಾಗಿ ಹೆಚ್ಚುವರಿ ಆದೇಶವನ್ನು ಘೋಷಿಸಲಾಯಿತು. ಏತನ್ಮಧ್ಯೆ, ಎಚ್‌ಎಎಲ್ ಹೆಚ್ಚು ಸುಧಾರಿತ ತೇಜಸ್ Mk-2 ಅನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಮೂಲ ಮಾದರಿಯನ್ನು ಹೊರತರುವುದಾಗಿ ಭರವಸೆ ನೀಡಿತ್ತು. ಆದರೆ, ಈ ಭರವಸೆಯನ್ನು ಈಡೇರಿಸಲು ಅದು ವಿಫಲವಾಗಿದೆ.
ತೇಜಸ್ Mk-2 ಯುದ್ಧವಿಮಾನ ಪೂರೈಕೆ ಸಂಬಂಧ ಎಚ್‌ಎಎಲ್‌ಗೆ ನೀಡಿದ್ದ ಗಡುವು 2023, 2024, 2025 ಮತ್ತು 2026ರವರೆಗೆ ನಿರಂತರವಾಗಿ ಮುಂದೂಡಲ್ಪಡುತ್ತಿದೆ.
2026ರ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಫಾರ್ನ್‌ಬರೋ ಏರ್‌ಶೋನಲ್ಲಿ ಎಚ್‌ಎಎಲ್ ನೀಡಿದ ಮಾಹಿತಿಯ ಪ್ರಕಾರ, 2027ರ ಮಾರ್ಚ್ ಮತ್ತು ಜುಲೈ ನಡುವೆ Mk-2ನ ಮೊದಲ ಹಾರಾಟ ನಿರೀಕ್ಷಿಸಲಾಗಿದೆ.
'ಎಚ್‌ಎಎಲ್‌ನಲ್ಲಿರುವ ತುರ್ತು ಭಾವನೆಯು ಭಾರತೀಯ ವಾಯುಪಡೆಯ ತುರ್ತು ಭಾವನೆಗೆ ಸಮನಾಗಿಲ್ಲ. ಎಚ್‌ಎಎಲ್ ಅಧಿಕಾರಿಗಳು ತಮ್ಮ ಕೆಲಸದ ವಿಷಯದಲ್ಲಿ ತೋರುವ ತುರ್ತು ಭಾವನೆಯು, ಭಾರತೀಯ ವಾಯುಪಡೆಯು ನಿರೀಕ್ಷಿಸುವ ಮಟ್ಟಕ್ಕಿಂತ ತೀರಾ ಕಡಿಮೆ ಇದೆ' ಎಂದು ಕಪೂರ್ ಹೇಳಿದ್ದಾರೆ.
ಭಾರತೀಯ ವಾಯುಪಡೆಯು ಕೇವಲ ತೇಜಸ್ ಯೋಜನೆಯ ಬಗ್ಗೆ ಮಾತ್ರ ಕಳವಳ ಹೊಂದಿಲ್ಲ. ಭಾರತ ಇತ್ತೀಚೆಗೆ 5ನೇ ಪೀಳಿಗೆಯ ಬಹು ಉದ್ದೇಶದ ಯುದ್ಧ ವಿಮಾನ (ಎಎಂಸಿಎ) ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿತ್ತು. ಎಎಂಸಿಎ ಅಭಿವೃದ್ಧಿ ಮತ್ತು ಪರೀಕ್ಷೆಗಳಿಗೆ ದಶಕ ತೆಗೆದುಕೊಳ್ಳಬಹುದು. ಅದರ ಮೊದಲ ಆವೃತ್ತಿ ಸೇರ್ಪಡೆಗೆ ಲಭ್ಯವಾದಾಗ ಆರಂಭಿಕ ತಂತ್ರಜ್ಞಾನದ ಮಾನದಂಡಗಳನ್ನು ತಲುಪಲು ವಿಫಲವಾಗಬಹುದು ಎಂಬುದು ಕಪೂರ್ ಮಾತು.
ಭಾರತವು ಅತ್ಯಾಧುನಿಕ ಆರನೇ ಪೀಳಿಗೆಯ ಜೆಟ್‌ಗಳನ್ನು ಬಳಸುತ್ತಿರುವ ಐರೋಪ್ಯ ಒಕ್ಕೂಟದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
FCAS (Future Combat Air System) ಎಂಬುದು ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್ ದೇಶಗಳ ಜಂಟಿ ಯೋಜನೆಯಾಗಿದ್ದು, 2040ರ ವೇಳೆಗೆ ಡ್ರೋನ್‌ಗಳು ಮತ್ತು ಕಾಂಬ್ಯಾಟ್ ಕ್ಲೌಡ್ ನೆಟ್‌ವರ್ಕ್ ಜೊತೆಗೆ ಮುಂದಿನ ಪೀಳಿಗೆಯ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
GCAP (Global Combat Air Programme) ಎಂಬುದು ಬ್ರಿಟನ್, ಇಟಲಿ ಮತ್ತು ಜಪಾನ್ ನಡುವಿನ ಜಂಟಿ ಯೋಜನೆಯಾಗಿದೆ. ಇದು 2035ರ ವೇಳೆಗೆ ಮುಂದಿನ ಪೀಳಿಗೆಯ ಯುದ್ಧ ವಿಮಾನ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.

