ನವದೆಹಲಿ: ನ್ಯಾಯಾಧೀಶರು ದೇವರಲ್ಲ, ನಮ್ಮ ಪ್ರತಿಯೊಂದು ತೀರ್ಪು ಸರಿಯಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ಗಮಿತ ನ್ಯಾಯಮೂರ್ತಿ ಸಂಜಯ್ ಕರೋಲ್ ಹೇಳಿದ್ದಾರೆ.
ʼನ್ಯಾಯ ಒದಗಿಸಲು ವಿನಮ್ರತೆ ಮತ್ತು ಪ್ರತಿಯೊಬ್ಬ ದಾವೆದಾರನ ಹಿನ್ನೆಲೆ ಗುರುತಿಸುವ ಸಾಮರ್ಥ್ಯ ಅಗತ್ಯʼ ಎಂದು ಕರೋಲ್ ತಿಳಿಸಿದ್ದಾರೆ.
ಶನಿವಾರ ನಡೆದ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನವು ಕಾನೂನಿನಂತೆ ನಡೆಯುವುದನ್ನಷ್ಟೇ ಹೇಳುವುದಿಲ್ಲ. ಅದರೊಟ್ಟಿಗೆ, ನ್ಯಾಯಯುತವಾಗಿ ನಡೆದುಕೊಳ್ಳುವಂತೆಯೂ ಸೂಚಿಸುತ್ತದೆ.
ನಿವೃತ್ತರಾದ ಸಂಜಯ್ ಕರೋಲ್
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ್ ರಾಯ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನ್ಯಾಯಮೂರ್ತಿ ಕರೋಲ್ ಅವರಿಗೆ ಶುಭಕೋರಿದರು.
ಇದೇ ವೇಳೆ ತಮ್ಮ 40 ವರ್ಷಗಳ ಸುದೀರ್ಘ ನ್ಯಾಯಾಂಗ ಸೇವೆಯನ್ನು ಸ್ಮರಿಸಿದ ಕರೋಲ್, ನ್ಯಾಯಾಲಯದ ಕೊಠಡಿ ತಮಗೆ ಕೇವಲ ಕೆಲಸದ ಸ್ಥಳವಾಗಿರಲಿಲ್ಲ, ಅದಕ್ಕಿಂತ ಮಿಗಿಲಾದ ಜವಾಬ್ದಾರಿಯಾಗಿತ್ತು ಎಂದರು.
ʼನ್ಯಾಯಾಲಯಕ್ಕೆ ಬರುವ ಸಾಮಾನ್ಯ ಪ್ರಜೆಯ ನಂಬಿಕೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನೈಜ ಶಕ್ತಿಯಿದೆ. ಆದರೆ, ನ್ಯಾಯವು ತೀರಾ ದೂರ, ದುಬಾರಿ ಅಥವಾ ಭಯಾನಕ ಎಂದುಕೊಂಡು ಈ ಬಾಗಿಲನ್ನೇ ತಲುಪಲಾಗದ ಲಕ್ಷಾಂತರ ಜನರನ್ನೂ ನಾವು ನೆನಪಿನಲ್ಲಿಡಬೇಕುʼ ಎಂದು ಹೇಳಿದರು.
ಕರೋಲ್ ಹಿನ್ನೆಲೆ
1961 ಆಗಸ್ಟ್ 23ರಂದು ಜನಿಸಿದ ಕರೋಲ್ ಅವರು ಶಿಮ್ಲಾದಲ್ಲಿ ಶಿಕ್ಷಣ ಪೂರೈಸಿದರು. ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ ಅಡ್ವೊಕೇಟ್ ಜನರಲ್ ಆಗಿ ಮತ್ತು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನಂತರ ತ್ರಿಪುರ ಮತ್ತು ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ ಇವರು, 2023 ಫೆಬ್ರುವರಿ 6ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು.

