ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ 301 ಶೌರ್ಯ ಪದಕಗಳನ್ನು ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಶುಕ್ರವಾರ ಘೋಷಿಸಿದೆ.
ಈ ಪೈಕಿ 197 ಪದಕಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ನೀಡಲಾಗಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣೆ ಹಾಗೂ ಕಾರಾಗೃಹ ಇಲಾಖೆಯ ಒಟ್ಟು 1,057 ಸಿಬ್ಬಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.
ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆ, ಅಪರಾಧ ತಡೆಗಟ್ಟುವಿಕೆ ಅಥವಾ ಅಪರಾಧಿಗಳ ಬಂಧನದಲ್ಲಿ ಅಧಿಕಾರಿಗಳ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಪರಿಗಣಿಸಿ, ಜೀವದ ಹಂಗು ತೊರೆದು ಸಾಹಸಮಯ ಕೆಲಸಕ್ಕಾಗಿ ಈ ಶೌರ್ಯ ಪದಕಗಳನ್ನು ನೀಡಲಾಗುತ್ತದೆ.
ಶೌರ್ಯ ಪದಕ ಪುರಸ್ಕೃತರ ಪೈಕಿ 272 ಪೊಲೀಸ್ ಸಿಬ್ಬಂದಿ ಹಾಗೂ 29 ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ.
ಒಟ್ಟು 301 ಶೌರ್ಯ ಪದಕಗಳಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ 197 ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 51 ಸಿಬ್ಬಂದಿ, ಈಶಾನ್ಯ ರಾಜ್ಯಗಳ 12 ಸಿಬ್ಬಂದಿ ಹಾಗೂ ಇತರ ಪ್ರದೇಶಗಳ 41 ಸಿಬ್ಬಂದಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಇದರ ಜೊತೆಗೆ, 92 ಪೊಲೀಸ್ ಸಿಬ್ಬಂದಿಗೆ ವಿಶಿಷ್ಟ ಸೇವೆಗೆ ನೀಡಲಾಗುವ 'ರಾಷ್ಟ್ರಪತಿಗಳ ಪದಕ'ವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
92 ರಾಷ್ಟ್ರಪತಿ ಪದಕಗಳ ಪೈಕಿ 83 ಪದಕಗಳನ್ನು ಪೊಲೀಸ್ ಸೇವೆಗೆ, 04 ಅಗ್ನಿಶಾಮಕ ಸೇವೆಗೆ, 03 ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಪಡೆಗೆ ಹಾಗೂ 02 ಪದಕಗಳನ್ನು ಕಾರಾಗೃಹ ಇಲಾಖೆಯ ಸೇವೆಗೆ ನೀಡಲಾಗಿದೆ.
ಇನ್ನು ಕರ್ತವ್ಯ ನಿಷ್ಠೆ ಮತ್ತು ವಿಶೇಷ ಸೇವೆಗಾಗಿ ನೀಡಲಾಗುವ 'ಪ್ರಶಂಸನೀಯ ಸೇವಾ ಪದಕ'ವನ್ನು ಒಟ್ಟು 664 ಸಿಬ್ಬಂದಿಗೆ ಪ್ರಕಟಿಸಲಾಗಿದೆ. ಇದರಲ್ಲಿ 606 ಪೊಲೀಸ್ ಸಿಬ್ಬಂದಿ, 28 ಅಗ್ನಿಶಾಮಕ ಸಿಬ್ಬಂದಿ, 18 ನಾಗರಿಕ ರಕ್ಷಣೆ ಹಾಗೂ ಗೃಹರಕ್ಷಕ ಸಿಬ್ಬಂದಿ ಮತ್ತು 12 ಕಾರಾಗೃಹ ಇಲಾಖೆಯ ಸಿಬ್ಬಂದಿ ಸೇರಿದ್ದಾರೆ.

