ಸ್ಯೂಟ: ಮೊರಾಕ್ಕೊದಿಂದ ಸ್ಪೇನ್‌ನ ಸ್ಯೂಟ ನಗರಕ್ಕೆ ಕಳೆದ 24 ಗಂಟೆಗಳಲ್ಲಿ ಸುಮಾರು 60 ಸಾವಿರ ವಲಸಿಗರು ಗಡಿ ದಾಟಿ ಪ್ರವೇಶಿಸಿದ್ದು, ಈ ವೇಳೆ ಸಂಭವಿಸಿದ ಅವಘಡಗಳಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.
ಒಂದೇ ದಿನದಲ್ಲಿ ನಗರ ಜನಸಂಖ್ಯೆಯ ಸುಮಾರು ಶೇ 70ರಷ್ಟು ಜನರು ಗಡಿ ದಾಟಿ ಪ್ರವೇಶಿಸಿರುವುದರಿಂದ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಿದೆ ಎಂದು ಸ್ಯೂಟ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ ಜುವಾನ್ ಜೀಸಸ್ ವಿವಾಸ್ ಹೇಳಿದ್ದಾರೆ.
ಗಡಿ ದಾಟಿ ಬರುವುದು ಗುರುವಾರದಿಂದಲೇ ಆರಂಭವಾಗಿದ್ದು, ಮೊರಾಕ್ಕೊ ಭಾಗದಲ್ಲಿ ಭದ್ರತಾ ಪಡೆಗಳು ಮತ್ತು ವಲಸಿಗರ ನಡುವೆ ಘರ್ಷಣೆ ನಡೆದಿದೆ. ನೂರಾರು ಮಂದಿ ಈಜಿಕೊಂಡು ಸ್ಪೇನ್ ಗಡಿಗೆ ಪ್ರವೇಶಿಸಲು ಯತ್ನಿಸಿದರೆ, ಕೆಲವರು ಮತ್ತೆ ಮೊರಾಕ್ಕೊಗೆ ಹಿಂದಿರುಗಿದ್ದಾರೆ.
ಸ್ಪೇನ್‌ಗೆ ಸೇರಿದ ಸ್ಯೂಟ ಆಫ್ರಿಕಾದ ಉತ್ತರ ಕರಾವಳಿಯಲ್ಲಿದೆ. ಈ ಸ್ವಾಯತ್ತ ನಗರವು ಮೊರೊಕ್ಕೊದೊಂದಿಗೆ ಗಡಿ ಹಂಚಿಕೊಂಡಿದೆ.
'ಇದು ಸ್ಪೇನ್‌ನ ಪ್ರಾದೇಶಿಕ ಸಾರ್ವಭೌಮತ್ವದ ಉಲ್ಲಂಘನೆ' ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಜ್ ಹೇಳಿದ್ದಾರೆ. ಮಾನವ ಕಳ್ಳಸಾಗಣೆ ಜಾಲಗಳು ಯುವಕರನ್ನು ದಾರಿ ತಪ್ಪಿಸಿ ಅಪಾಯಕ್ಕೆ ದೂಡುತ್ತಿವೆ ಎಂದು ಆರೋಪಿಸಿದ್ದಾರೆ.
ಗಡಿ ದಾಟುವ ವೇಳೆ ಸಾವು
ಸ್ಯೂಟ ಗಡಿ ಪ್ರದೇಶದಲ್ಲಿ ಹಲವು ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದು, ಇನ್ನೂ ಕೆಲವರು ಗಡಿ ತಡೆಗೋಡೆ ದಾಟುವ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಪ್ರದೇಶದಲ್ಲಿ ಸಾವಿರಾರು ವಲಸಿಗರು, ಅವರಲ್ಲಿ ಅನಾಥ ಮಕ್ಕಳು ಕೂಡ ಸೇರಿದ್ದು, ಉದ್ಯಾನಗಳು ಮತ್ತು ಕಾಲುದಾರಿಗಳಲ್ಲಿ ಆಶ್ರಯ ಪಡೆದಿರುವುದರಿಂದ ಮಾನವೀಯ ಬಿಕ್ಕಟ್ಟು ಉಂಟಾಗಿದೆ ಎಂದು ಸ್ಥಳೀಯ ಭದ್ರತಾ ಸಿಬ್ಬಂದಿ ಸಂಘಟನೆ ಹೇಳಿದೆ.
(AP, AFP ವರದಿ)

