ನವದೆಹಲಿ: ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ತನ್ನ ಅನುಮೋದಿತ ಪೂರ್ಣ ಪ್ರಮಾಣದ ಸಿಬ್ಬಂದಿ ಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದರೂ 40,000ಕ್ಕೂ ಅಧಿಕ ಮಾಹಿತಿ ಹಕ್ಕು (ಆರ್‌ಟಿಐ) ಪ್ರಕರಣಗಳು ಬಾಕಿ ಉಳಿದಿವೆ ಎಂದು thewire.in ವರದಿ ಮಾಡಿದೆ.
ಮುಖ್ಯ ಮಾಹಿತಿ ಆಯುಕ್ತ ರಾಜಕುಮಾರ್ ಗೋಯಲ್ ಡಿಸೆಂಬರ್ 2025ರಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಇವರೊಂದಿಗೆ 10 ಮಾಹಿತಿ ಆಯುಕ್ತರು (ಐಸಿ) ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಗಸ್ಟ್ 12ಕ್ಕೆ ಇದ್ದಂತೆ ಅಧಿಕೃತ ಸಿಐಸಿ ಪೋರ್ಟಲ್‌ನಲ್ಲಿಯ ದತ್ತಾಂಶದ ಪ್ರಕಾರ,3,733 ದೂರುಗಳು ಮತ್ತು 36,350 ಮೇಲ್ಮನವಿಗಳು (ಒಟ್ಟು 40,083 ಪ್ರಕರಣಗಳು) ಸಿಐಸಿಯಲ್ಲಿ ಬಾಕಿಯಾಗಿವೆ.
ಈ ಪೈಕಿ, ಗೋಯಲ್ ಬಳಿಯೇ 522 ದೂರುಗಳು ಮತ್ತು 4,795 ಮೇಲ್ಮನವಿಗಳು ಸೇರಿದಂತೆ 5,317 ಪ್ರಕರಣಗಳು ಬಾಕಿ ಇವೆ.
ಸಿಐಸಿಯ ಮಾಸಿಕ ಪ್ರಗತಿ ವರದಿಯ ಪ್ರಕಾರ ಆಗಸ್ಟ್‌ನಲ್ಲಿ ಮಾಹಿತಿ ಆಯುಕ್ತರಾದ ವಿನೋದ್ ಕುಮಾರ್ ತಿವಾರಿ ಒಂದು ಮತ್ತು ಸ್ವಾಗತ್ ದಾಸ್ ಎರಡು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಅಂದರೆ ಆಯೋಗವು ಈ ತಿಂಗಳಲ್ಲಿ ಕೇವಲ ಮೂರು ಪ್ರಕರಣಗಳನ್ನು ವಿಲೇವಾರಿಗೊಳಿಸಿದೆ.
ಗೋಯಲ್ ಹಾಗೂ ಉಳಿದ ಎಂಟು ಮಾಹಿತಿ ಆಯುಕ್ತರಾದ ಆನಂದಿ ರಾಮಲಿಂಗಂ, ಸುರೇಂದ್ರ ಸಿಂಗ್ ಮೀನಾ, ಅಶುತೋಷ್ ಚತುರ್ವೇದಿ, ಸುಧಾರಾಣಿ ರೇಲಂಗಿ, ಪಿ.ಆರ್. ರಮೇಶ್, ಖುಷ್‌ವಂತ್ ಸಿಂಗ್ ಸೇಥಿ, ಜಯಾ ವರ್ಮಾ ಸಿನ್ಹಾ ಮತ್ತು ಸಂಜೀವ್ ಕುಮಾರ್ ಜಿಂದಾಲ್) ಮತ್ತು ಮುಖ್ಯ ಆಯುಕ್ತ ಗೋಯಲ್ ಅವರು ಆಗಸ್ಟ್‌ನ ಮೊದಲ 12 ದಿನಗಳಲ್ಲಿ ಯಾವುದೇ ಪ್ರಕರಣವನ್ನು ಸ್ವೀಕರಿಸಿಲ್ಲ ಅಥವಾ ವಿಲೇವಾರಿ ಮಾಡಿಲ್ಲ.
ಗೋಯಲ್ ಜನವರಿ ಮತ್ತು ಜುಲೈ ನಡುವೆ ತಾನು ಸ್ವೀಕರಿದ್ದ 2,541 ಮೇಲ್ಮನವಿಗಳಲ್ಲಿ 1,180ನ್ನು ವಿಲೇವಾರಿ ಮಾಡಿದ್ದಾರೆ (ಶೇ.46).
2026ರಲ್ಲಿ ಈವರೆಗೆ ಸಿಐಸಿ 20,163 ಮೇಲ್ಮನವಿಗಳನ್ನು ಸ್ವೀಕರಿಸಿದ್ದು, ಈ ಪೈಕಿ ಕೇವಲ 11,903 ಮೇಲ್ಮನವಿಗಳನ್ನು ವಿಲೇವಾರಿ ಮಾಡಲಾಗಿದೆ.
ಆಯುಕ್ತರು ಪ್ರಕರಣಗಳ ವಿಲೇವಾರಿಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಕಾರ್ಯಕರ್ತ ಕಮಾಂಡರ್(ನಿವೃತ್ತ) ಲೋಕೇಶ್ ಬಾತ್ರಾ ಅವರು, ಇದು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೋರುವ ನಾಗರಿಕರಲ್ಲಿ ನಿರಾಶೆಯನ್ನುಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಗಂಭೀರ ಬಾಕಿ ಪ್ರಕರಣಗಳ ಸಮಸ್ಯೆಯನ್ನು ಪರಿಹರಿಸಲು ಆಯುಕ್ತರು ಹೆಚ್ಚುವರಿ ಗಂಟೆಗಳು ಅಥವಾ ದಿನಗಳು ಕೆಲಸ ಮಾಡುವುದು ಸೇರಿದಂತೆ ಆಂತರಿಕ ಸುಧಾರಣೆಗಳ ಅಗತ್ಯವಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

