HEALTH TIPS

ಕಾರ್ಪೊರೇಟ್‌ ಒತ್ತಡಕ್ಕೆ ಮಣಿಯುತ್ತಿದೆಯೇ FSSAI?: ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿರುವ ಪ್ಯಾಕ್‌ ಮಾಡಲಾದ ಆಹಾರ ಉತ್ಪನ್ನಗಳ ಮೇಲೆ ಪ್ಯಾಕ್‌ ನ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್‌ ಅಳವಡಿಸುವ ವಿಚಾರದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತೋರುತ್ತಿರುವ ಹಿಂಜರಿಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿತು. 

ಆಹಾರ ತಯಾರಿಕಾ ಕಾರ್ಪೊರೇಟ್‌ ಸಂಸ್ಥೆಗಳ ಒತ್ತಡಕ್ಕೆ FSSAI ಮಣಿಯುತ್ತಿದೆಯೇ ಎಂದೂ ಪೀಠ ಖಾರವಾಗಿ ಕೇಳಿತು. 


ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಎಚ್ಚರಿಕೆ ಲೇಬಲ್‌ಗಳನ್ನು ಪರಿಚಯಿಸುವಂತೆ FSSAIಗೆ ಸೂಚಿಸಿದ್ದ ಪ್ರಕರಣದ ವಿಚಾರಣೆ ನಡೆಸಿತು.

FSSAI ನಡೆಸಿದ ಸಭೆಯ ನಡಾವಳಿಗಳ ಆಧಾರದಲ್ಲಿ, ಇಂತಹ ಕ್ರಮ ಜಾರಿಗೆ ತರಲು ಪ್ರಾಧಿಕಾರ ಹಿಂಜರಿಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೀಠ ಅಸಮಾಧಾನ ವ್ಯಕ್ತಪಡಿಸಿತು.

'ಈ ಎಲ್ಲ ಕಾರ್ಪೊರೇಟ್‌ ಸಂಸ್ಥೆಗಳಿಂದ ನಿಮ್ಮ ಮೇಲೆ ಅಪಾರ ಒತ್ತಡವಿದೆ. ನೀವು ಆ ಒತ್ತಡಕ್ಕೆ ಮಣಿಯುತ್ತಿದ್ದೀರಿ. ನಾವು ಇದನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡುತ್ತಿದ್ದೇವೆ. ನಮಗಾಗಿ ಮಾಡುತ್ತಿಲ್ಲ. ನಮ್ಮ ಆದೇಶವನ್ನು ಏಕೆ ಪಾಲಿಸುತ್ತಿಲ್ಲ? ಇಲ್ಲಿಯವರೆಗೆ ನೀವು ಏನು ಮಾಡಿದ್ದೀರಿ? ನಿಮ್ಮ ಮೇಲಿರುವ ಒತ್ತಡ ನಮಗೆ ಗೊತ್ತಿದೆ. ನೀವೇ ಇದನ್ನು ಮಾಡುತ್ತೀರೋ ಅಥವಾ ನಾವು ಆದೇಶ ನೀಡಬೇಕೋ?' ಎಂದು ಪೀಠ ಪ್ರಶ್ನಿಸಿತು.

ಎಚ್ಚರಿಕೆ ಲೇಬಲ್‌ಗಳನ್ನು ಪರಿಚಯಿಸಿದರೆ ನಮ್ಕೀನ್‌ ನಂತಹ ಹಲವು ಭಾರತೀಯ ಆಹಾರ ಉತ್ಪನ್ನಗಳ ಮೇಲೂ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಪ್ರಮಾಣ ಅಧಿಕವಾಗಿದೆ ಎಂಬ ಎಚ್ಚರಿಕೆ ಚಿಹ್ನೆ ಬರಲಿದೆ ಎಂಬ ವಾದಕ್ಕೂ ನ್ಯಾಯಾಲಯ ಒಪ್ಪಲಿಲ್ಲ.

'ಈ ದೇಶದ ಜನರು ಆರೋಗ್ಯವಾಗಿರಬೇಕೆಂದು ನೀವು ಬಯಸುವುದಿಲ್ಲವೇ? ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ?' ಎಂದು ಪೀಠ ಪ್ರಶ್ನಿಸಿತು.

'ಯಾವುದೇ ಉತ್ಪನ್ನದ ವಿರುದ್ಧವಲ್ಲ'

ನ್ಯಾಯಾಲಯವು ಯಾವುದೇ ನಿರ್ದಿಷ್ಟ ಆಹಾರ ಉತ್ಪನ್ನದ ವಿರುದ್ಧವಲ್ಲ, ಬದಲಿಗೆ ಗ್ರಾಹಕರಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದೇ ತನ್ನ ಉದ್ದೇಶ ಎಂದು ಸ್ಪಷ್ಟಪಡಿಸಿತು.

'ಈ ದೇಶದಲ್ಲಿ ಎಷ್ಟು ಜನರು ಒಣ ಹಣ್ಣುಗಳನ್ನು ಖರೀದಿಸಲು ಶಕ್ತರಾಗಿದ್ದಾರೆ? ಎಷ್ಟು ಮಕ್ಕಳು ಕುರ್ಕುರೆ ಖರೀದಿಸುತ್ತಾರೆ? ಅದೇ ಎಲ್ಲ ವ್ಯತ್ಯಾಸವನ್ನುಂಟು ಮಾಡುತ್ತದೆ. ನಾವು ಯಾವುದೇ ನಿರ್ದಿಷ್ಟ ಉತ್ಪನ್ನದ ವಿರುದ್ಧವಲ್ಲ. ಅದನ್ನು ಖರೀದಿಸುವ ವ್ಯಕ್ತಿಗೆ ತಾನು ಏನು ಸೇವಿಸುತ್ತಿದ್ದೇನೆ ಎಂಬುದು ತಿಳಿದಿರಬೇಕು ಎಂಬುದಷ್ಟೇ ನಮ್ಮ ಉದ್ದೇಶ' ಎಂದು ಪೀಠ ಹೇಳಿತು.

ಈ ವಿಷಯದಲ್ಲಿ ತನ್ನ ಅಂತಿಮ ನಿರ್ಧಾರವನ್ನು ದಾಖಲಿಸಲು ಕೇಂದ್ರ ಸರಕಾರ ಮತ್ತು FSSAIಗೆ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿತು.

'ಇದು ನಿಮ್ಮ (ಕೇಂದ್ರ) ಕೊನೆಯ ಅವಕಾಶ. ಮುಂದಿನ ಬಾರಿ ನಾವು ತೀರ್ಪನ್ನು ನಿರ್ದೇಶಿಸುತ್ತೇವೆ' ಎಂದು ಪೀಠ ಎಚ್ಚರಿಸಿತು.

ಏನಿದು ಪ್ರಕರಣ?

ಪ್ಯಾಕ್‌ ಮಾಡಲಾದ ಆಹಾರ ಪದಾರ್ಥಗಳಲ್ಲಿರುವ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವ ಸಲುವಾಗಿ ಪ್ಯಾಕ್‌ ನ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿತ್ತು.

2025ರ ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ PIL ಅನ್ನು ವಿಲೇವಾರಿ ಮಾಡಿ, ಈ ಕುರಿತು FSSAI ರಚಿಸಿರುವ ತಜ್ಞರ ಸಮಿತಿಯು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವಂತೆ ನಿರ್ದೇಶಿಸಿತ್ತು.

ನಂತರ FSSAI ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿತ್ತು.

ತಜ್ಞರ ಸಮಿತಿಯು 'ಇಂಡಿಯನ್ ನ್ಯೂಟ್ರಿಷನ್ ರೇಟಿಂಗ್' (INR) ವ್ಯವಸ್ಥೆ ಕುರಿತು ಚರ್ಚಿಸಿದ್ದು, 14,000ಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು. ಆದರೆ ಪ್ರಸ್ತಾವಿತ ಲೇಬಲಿಂಗ್ ವ್ಯವಸ್ಥೆಯ ಸ್ವರೂಪದ ಬಗ್ಗೆ ಒಮ್ಮತ ಮೂಡಿಲ್ಲ ಎಂದು FSSAI ತಿಳಿಸಿತ್ತು.

ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಹೆಚ್ಚುವರಿ ಸಂಶೋಧನೆ, ಆಹಾರ ಉದ್ಯಮ, ಗ್ರಾಹಕ ಸಂಘಟನೆಗಳು, ತಜ್ಞರು ಸೇರಿದಂತೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ಮತ್ತು ಜಾಗತಿಕ ಪ್ರವೃತ್ತಿಗಳ ವಿಶ್ಲೇಷಣೆ ನಡೆಸುವ ಅಗತ್ಯವಿದೆ ಎಂದೂ ಅಫಿಡವಿಟ್‌ ನಲ್ಲಿ ಹೇಳಲಾಗಿತ್ತು.

ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಪ್ಯಾಕ್‌ ಮಾಡಲಾದ ಆಹಾರ ಉತ್ಪನ್ನಗಳ ಮೇಲೆ ಪ್ಯಾಕ್‌ನ ಮುಂಭಾಗದಲ್ಲೇ ಎಚ್ಚರಿಕೆ ಲೇಬಲ್‌ ಗಳನ್ನು ಅಳವಡಿಸುವ ಸಾಧ್ಯತೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ FSSAIಗೆ ನಿರ್ದೇಶಿಸಿತ್ತು. ಇಂತಹ ಲೇಬಲಿಂಗ್ ವ್ಯವಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತದಲ್ಲಿದ್ದು, ಗ್ರಾಹಕರು ತ್ವರಿತವಾಗಿ ಹಾಗೂ ಸುಲಭವಾಗಿ ಮಾಹಿತಿಯುಕ್ತ ಆಹಾರ ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ಆಗ ಪೀಠ ಹೇಳಿತ್ತು.

'ಪ್ರತಿಯೊಂದು ಆಹಾರದ ಮೇಲೂ ಕೆಂಪು ಚಿಹ್ನೆ'

ಗುರುವಾರದ ವಿಚಾರಣೆಯಲ್ಲಿ FSSAI ಮತ್ತು ಭಾರತ ಒಕ್ಕೂಟದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಬ್ರಿಜೇಂದರ್ ಚಾಹರ್, ಭಾರತೀಯ ಆಹಾರದಲ್ಲಿ ಉಪ್ಪು, ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಸಾಮಾನ್ಯವಾಗಿ ಹೆಚ್ಚಿರುವುದರಿಂದ ಇತರ ದೇಶಗಳಲ್ಲಿ ಅನುಸರಿಸುವ ಮಾದರಿಯ ಎಚ್ಚರಿಕೆ ಲೇಬಲಿಂಗ್ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೊಳಿಸುವುದು ಸೂಕ್ತವಲ್ಲ ಎಂದು ವಾದಿಸಿದರು.

'ನಮ್ಮ ಪ್ರತಿಯೊಂದು ಸಾಂಪ್ರದಾಯಿಕ ಆಹಾರದ ಮೇಲೂ ಕೆಂಪು ಚಿಹ್ನೆ ಬರುವುದು ಕಷ್ಟ. ಅದು ನಮ್ಕೀನ್ ಆಗಿರಲಿ ಅಥವಾ ಇತರ ಆಹಾರ ಪದಾರ್ಥಗಳಾಗಿರಲಿ, ಅವುಗಳನ್ನು ತುಂಬಾ ಹಾನಿಕಾರಕ ಎಂಬಂತೆ ಎಚ್ಚರಿಸುವಂತಾಗುತ್ತದೆ. ಕೊಬ್ಬಿನ ಅನುಮತಿಸುವ ಮಿತಿ ದಿನಕ್ಕೆ 10 ಗ್ರಾಂ. ಎರಡು ಮೊಟ್ಟೆಗಳಲ್ಲಿ 11 ಗ್ರಾಂ ಕೊಬ್ಬು ಇರುತ್ತದೆ. ಹೀಗಾಗಿ ಒಂದು ಮೊಟ್ಟೆಯ ಮೇಲೂ ಕೆಂಪು ಚಿಹ್ನೆ ಬರಬಹುದು' ಎಂದು ಅವರು ಹೇಳಿದರು.

'ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಹಾರದಲ್ಲಿ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲಿನ ಮಾನದಂಡಗಳನ್ನು ಭಾರತೀಯ ಸಾಂಪ್ರದಾಯಿಕ ಆಹಾರಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಹೀಗಾದರೆ ಪ್ರತಿಯೊಂದು ಆಹಾರ ಪದಾರ್ಥದ ಮೇಲೂ ಕೆಂಪು ಲೇಬಲ್‌ ಬರುವಂತಾಗುತ್ತದೆ' ಎಂದರು. ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.

'ಆಹಾರದ ಮೇಲೆ ಕೆಂಪು ಎಚ್ಚರಿಕೆ ಲೇಬಲ್‌ ಹಾಕದಿದ್ದರೂ, ಅದರಲ್ಲಿ ಸಕ್ಕರೆ, ಕೊಬ್ಬು ಮತ್ತು ಕಾರ್ಬೊಹೈಡ್ರೇಟ್‌ಗಳಿವೆ ಎಂಬುದು ಜನರಿಗೆ ತಿಳಿದೇ ಇದೆ. ಆದರೆ ಲೇಬಲ್‌ ಹಾಕುವುದರಿಂದ ಆಹಾರದಲ್ಲಿರುವ ಈ ಅಂಶಗಳ ಬಗ್ಗೆ ಜನರಿಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಸಿಗುತ್ತದೆ. ವಿಶೇಷವಾಗಿ ಇಂತಹ ಆಹಾರ ಸೇವನೆಗೆ ಮಕ್ಕಳು ಹೆಚ್ಚು ಒಳಗಾಗುತ್ತಿರುವ ಬಗ್ಗೆ ನೀವು ಕಾಳಜಿ ವಹಿಸಬೇಕು' ಎಂದು ಪೀಠ ಹೇಳಿತು.

'ಕಂಪೆನಿಗಳ ವ್ಯವಹಾರದ ಮೇಲೆ ಪರಿಣಾಮವಾಗಬಹುದು ಎಂಬ ಕಾರಣಕ್ಕೆ ಹಿಂಜರಿಕೆಯೇ?':

ಎಚ್ಚರಿಕೆ ಲೇಬಲ್‌ ಅಳವಡಿಸಲು FSSAI ಏಕೆ ಹಿಂಜರಿಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

'ಎಚ್ಚರಿಕೆ ಲೇಬಲ್‌ ಅಳವಡಿಸಿದರೆ ಆಹಾರ ತಯಾರಿಸುವ ಕಂಪೆನಿಗಳ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಅವರು ಈ ಕ್ರಮವನ್ನು ವಿರೋಧಿಸಬಹುದು. ಆದರೆ ಲೇಬಲ್‌ ಹಾಕಿದ ಬಳಿಕ ಆ ಆಹಾರವನ್ನು ಖರೀದಿಸಬೇಕೇ, ಬೇಡವೇ ಎಂಬುದನ್ನು ಗ್ರಾಹಕರೇ ನಿರ್ಧರಿಸುತ್ತಾರೆ. ಹಾಗಿದ್ದರೆ FSSAI ಈ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದೆ?' ಎಂದು ಪೀಠ ಪ್ರಶ್ನಿಸಿತು.

ಹೆಚ್ಚಿನ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಇರುವ ಪ್ಯಾಕ್‌ ಮಾಡಲಾದ ಆಹಾರಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಮುಖ್ಯ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರಕಾರ ಮತ್ತು FSSAIಗೆ ನ್ಯಾಯಾಲಯ ಸೂಚಿಸಿತು.

ಕೃಪೆ: barandbench.com 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries