ರಾಂಚಿ: ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ ಪ್ರತಿಭಟನೆಯ ಬೆನ್ನಲ್ಲೇ, ಜಾರ್ಖಂಡ್ ಸರ್ಕಾರವು ಪರೀಕ್ಷಾ ಅಕ್ರಮದ ಆರೋಪಕ್ಕೆ ಒಳಗಾಗಿದ್ದ ಒಟ್ಟು 44 ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶದಿಂದ ಸುಮಾರು 2,000 ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
JSSC-CGL ಪರೀಕ್ಷೆ ಮತ್ತು ಇತರ ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕಳೆದ ಒಂದು ತಿಂಗಳಿನಿಂದ ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯು ಸರ್ಕಾರದ ನಿರ್ಧಾರದಿಂದ ಕೊನೆಗೊಳ್ಳುವ ಹಂತ ತಲುಪಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ನಡೆದ ನೇಮಕ ಪರೀಕ್ಷೆ ಮೂಲಕ ಆಯ್ಕೆಯಾಗಿ ಈಗಾಗಲೇ ಉದ್ಯೋಗದಲ್ಲಿರುವ ಸುಮಾರು 2,000 ನೌಕರರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ JSSC-CGL (ಜಾರ್ಖಂಡ್ ಸಿಬ್ಬಂದಿ ನೇಮಕ ಆಯೋಗ - ಸಂಯೋಜಿತ ಪದವಿ ಮಟ್ಟದ) ಪರೀಕ್ಷೆ ಸೇರಿದಂತೆ TSR Data Processing Pvt Ltd (TDPL) ಸಂಸ್ಥೆ 2014ರಿಂದ ನಡೆಸಿದ 44 ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.
ರದ್ದುಕೊಂಡ ಪ್ರಮುಖ ನೇಮಕ ಪರೀಕ್ಷೆಗಳು
14ನೇ ಜೆಪಿಎಸ್ಸಿ ಪರೀಕ್ಷೆಯ 103 ಹುದ್ದೆಗಳು
ಸಿವಿಲ್ ಸರ್ವಿಸಸ್ ಬ್ಯಾಕ್ಲಾಗ್ 52 ಹುದ್ದೆಗಳು
ಅರಣ್ಯ ರೇಂಜ್ ಆಫೀಸರ್ 170 ಹುದ್ದೆಗಳು
ಸಹಾಯಕ ಅರಣ್ಯ ಸಂರಕ್ಷಕ 78 ಹುದ್ದೆಗಳು
ನಿಯಮಿತ ಸಹಾಯಕ ಸಾರ್ವಜನಿಕ ಅಭಿಯೋಜಕ 134 ಹುದ್ದೆಗಳು
ಎಪಿಪಿ ಬ್ಯಾಕ್ಲಾಗ್ 26 ಹುದ್ದೆಗಳು
ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) 38 ಹುದ್ದೆಗಳ ಪರೀಕ್ಷೆಗಳನ್ನು ಜಾರ್ಖಂಡ್ ಸರ್ಕಾರ ರದ್ದುಗೊಳಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಜೆಎಸ್ಎಸ್ಸಿ-ಸಿಜಿಎಲ್ ಮೂಲಕ ನೇಮಕಗೊಂಡ ಸುಮಾರು 1,975 ಜನರು ತಮ್ಮ ಉದ್ಯೋಗಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನೇಮಕವಾಗಿರುವ ಅಭ್ಯರ್ಥಿಗಳು ಮಂಗಳವಾರ (ಆಗಸ್ಟ್ 18) ಜಾರ್ಖಂಡ್ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಆರೋಪ ಹೊತ್ತಿರುವವರು ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ಉದ್ಯೋಗ ಪಡೆದುಕೊಂಡ ಅಭ್ಯರ್ಥಿಗಳ ನಡುವಿನ ವ್ಯತ್ಯಾಸವನ್ನು ಸರ್ಕಾರ ಗುರುತಿಸಬೇಕೆಂದು ಒತ್ತಾಯಿಸಿದ್ದಾರೆ.
ಕೆಲಸದಿಂದ ವಜಾಗೊಳ್ಳುವ ಆತಂಕದಲ್ಲಿರುವ ಅಭ್ಯರ್ಥಿಯೊಬ್ಬರು ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿ, 'ನಾವು ಮಾಡಿರುವ ಅಪರಾಧ ಏನೆಂದು ನಮಗೆ ತಿಳಿಸಿ. ದಯವಿಟ್ಟು ನಮ್ಮನ್ನು ಕೆಲಸದಿಂದ ವಜಾಗೊಳಿಸಬೇಡಿ' ಎಂದು ಮನವಿ ಮಾಡಿದ್ದಾರೆ.
ಸಹಾಯಕ ವಿಭಾಗಾಧಿಕಾರಿ ಕೌಶಲ್ ಕುಮಾರ್ ಸೇರಿ ಅನೇಕ ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಾವು ಕಾನೂನು ಪ್ರಕ್ರಿಯೆಗಳ ಬಳಿಕ ನೇಮಕಗೊಂಡಿದ್ದೇವೆ ಎಂದು ಹೇಳಿದ್ದಾರೆ. 'ನಮ್ಮ ತಪ್ಪೇನು? ನಮ್ಮನ್ನು ಉದ್ಯೋಗದಿಂದ ಹೊರಹಾಕಬೇಡಿ' ಎಂದು ಆಗ್ರಹಿಸಿದರು. ಅಕ್ರಮದ ಬಗ್ಗೆ ತನಿಖೆ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಯೋಮಿತಿ ದಾಟಿರುವ ಆತಂಕ
ಈ ಅಭ್ಯರ್ಥಿಗಳ ಆತಂಕಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ವಯೋಮಿತಿ. ಸರ್ಕಾರಿ ಉದ್ಯೋಗ ಸಿಕ್ಕ ಬಳಿಕ ತಮ್ಮ ಹಿಂದಿನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವರು ಈಗಾಗಲೇ ನೇಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವಯಸ್ಸಿನ ಮಿತಿಯನ್ನೂ ದಾಟಿದ್ದಾರೆ. ಹೀಗಾಗಿ ನೇಮಕ ರದ್ದಾದರೆ ಮತ್ತೊಮ್ಮೆ ಸರ್ಕಾರಿ ಉದ್ಯೋಗ ಪಡೆಯುವುದು ಕಷ್ಟ ಎಂಬುದು ಅವರ ಆತಂಕಕ್ಕೆ ಪ್ರಮುಖ ಕಾರಣ.
ಕೆಲ ಅಭ್ಯರ್ಥಿಗಳು ತಮ್ಮ ಉದ್ಯೋಗದ ಆಧಾರದ ಮೇಲೆ ಕುಟುಂಬ ಜೀವನವನ್ನು ರೂಪಿಸಿಕೊಂಡಿರುವುದರಿಂದ ಉದ್ಯೋಗ ಕಳೆದುಕೊಂಡರೆ ವೈಯಕ್ತಿಕ ಮತ್ತು ಆರ್ಥಿಕವಾಗಿ ಸಂಕಷ್ಟ ಎದುರಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
CBI ತನಿಖೆಗೆ ಆಗ್ರಹ
ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಯಾವುದೇ ತಪ್ಪು ಮಾಡದ ಅಭ್ಯರ್ಥಿಗಳ ನೇಮಕವನ್ನು ರದ್ದುಪಡಿಸಬಾರದು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳ ಹಲವು ದಿನಗಳ ಪ್ರತಿಭಟನೆ ಅಂತ್ಯದತ್ತ ಸಾಗಿದೆ. ಇನ್ನನೊಂದೆಡೆ ಈಗಾಗಲೇ ನೇಮಕಗೊಂಡ ಅಭ್ಯರ್ಥಿಗಳ ಹೊಸ ಪ್ರತಿಭಟನೆ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ. ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸುವುದರ ಜೊತೆಗೆ ಈಗಾಗಲೇ ನೇಮಕಗೊಂಡಿರುವ ಸುಮಾರು 2 ಸಾವಿರ ಅಭ್ಯರ್ಥಿಗಳ ಉದ್ಯೋಗವನ್ನು ಹೇಗೆ ಕಾಪಾಡುವುದು? ಎಂಬುದು ಸರ್ಕಾರದ ಮುಂದಿರುವ ಸವಾಲಾಗಿದೆ.

