ರಾಂಚಿ: ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ ಪ್ರತಿಭಟನೆಯ ಬೆನ್ನಲ್ಲೇ, ಜಾರ್ಖಂಡ್ ಸರ್ಕಾರವು ಪರೀಕ್ಷಾ ಅಕ್ರಮದ ಆರೋಪಕ್ಕೆ ಒಳಗಾಗಿದ್ದ ಒಟ್ಟು 44 ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸಿ ಮಂಗಳವಾರ ರಾತ್ರಿ ಅಧಿಕೃತ ಆದೇಶ ಬಿಡುಗಡೆ ಮಾಡಿದೆ.
ಮಂಗಳವಾರ ತಡರಾತ್ರಿ ಎಂಟು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿರುವ ಸರ್ಕಾರವು, 2014ರಿಂದ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್‌ಸಿ) ಹಾಗೂ ಹೊರಗುತ್ತಿಗೆ ಸಂಸ್ಥೆಯಾದ ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ (ಟಿಡಿಪಿಎಲ್) ನಡೆಸಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಇದಕ್ಕೆ ಪೂರಕವಾಗಿ ರದ್ದುಗೊಳಿಸಲಾದ 44 ಪರೀಕ್ಷೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ರದ್ದುಗೊಳಿಸಲಾದ ಪರೀಕ್ಷೆಗಳಲ್ಲಿ ಡ್ರಗ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕರು, ಉಪ ಜಿಲ್ಲಾಧಿಕಾರಿಗಳು, ದಂತ್ಯ ವೈದ್ಯರು, ಸಹಾಯಕ ಎಂಜಿನಿಯರ್‌ಗಳು, ಸಿವಿಲ್ ನ್ಯಾಯಾಧೀಶರು, ಹೆಚ್ಚುವರಿ ಸರ್ಕಾರಿ ಅಭಿಯೋಜಕರು (ಎಪಿಪಿ), ಅರಣ್ಯ ವಲಯಾಧಿಕಾರಿಗಳು (ಆರ್‌ಎಫ್‌ಒ) ಸೇರಿದಂತೆ ಪ್ರಮುಖ ಹುದ್ದೆಗಳ ನೇಮಕ ಪರೀಕ್ಷೆಗಳು ಸೇರಿವೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರತಿಭಟನಾನಿರತ ಉದ್ಯೋಗಾಂಕ್ಷಿಗಳ ಪ್ರಮುಖ ಬೇಡಿಕೆಯಾಗಿದ್ದ ಜೆಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ಸೇರಿದಂತೆ ಹೊರಗುತ್ತಿಗೆ ಟಿಡಿಪಿಎಲ್ ನಡೆಸಿದ್ದ ಎಲ್ಲ ಪರೀಕ್ಷೆಗಳು ಹಾಗೂ ಫಲಿತಾಂಶಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

