ಹೈದರಾಬಾದ್: ಯುವಕರನ್ನು ಜಿರಳೆಗೆ ಹೋಲಿಸಿದ್ದಾರೆ ಎನ್ನಲಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನ ನೀಡುವ ನಿರ್ಧಾರಕ್ಕೆ ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿಯ ಕಾನೂನು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
2026ರ ಬ್ಯಾಚ್‌ನ 450 ವಿದ್ಯಾರ್ಥಿಗಳು ಈ ಕುರಿತಂತೆ ಪತ್ರಕ್ಕೆ ಸಹಿ ಹಾಕಿದ್ದು, ಉಪಕುಲಪತಿ, ರಿಜಿಸ್ಟ್ರಾರ್, ಪ್ರೊಫೆಸರ್‌ಗಳು ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ನೀಡಿದ್ದಾರೆ. ಸಿಜೆಐ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ನ್ಯಾಯಾಂಗದ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಸ್ತಾಪಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಜುಲೈ 20 ರಂದು ನಡೆದ ಸಂಸತ್ ಚಲೊ ಪ್ರತಿಭಟನಾ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ವಿರುದ್ಧ ನಡೆದಿದೆ ಎನ್ನಲಾದ ಪೊಲೀಸರ ಕ್ರೂರ ವರ್ತನೆಗೆ ಸಂಬಂಧಿಸಿದ ವಿಚಾರಣೆಯನ್ನು ಸಿಜೆಐ ಸೂರ್ಯಕಾಂತ್ ನಿರ್ವಹಿಸಿದ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಮನವಿ ಹಿನ್ನೆಲೆ ಜುಲೈ 23 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರ ದೌರ್ಜನ್ಯವನ್ನು ತೋರಿಸುವ ವಿಡಿಯೊ ಸಾಕ್ಷ್ಯವನ್ನು ವೀಕ್ಷಿಸಲು ಮುಖ್ಯ ನ್ಯಾಯಮೂರ್ತಿ ನಿರಾಕರಿಸಿದ್ದಾರೆ. 'ನಮಗೆ ವಿಡಿಯೊಗಳಲ್ಲಿ ಆಸಕ್ತಿ ಇಲ್ಲ, ಅವುಗಳನ್ನು ನೋಡಲು ನಮಗೆ ಸಮಯವೂ ಇಲ್ಲ' ಎಂದು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ್ದಾರೆ. ಅರ್ಜಿದಾರರ ಪರ ವಕೀಲರು ಮಂಡಿಸುತ್ತಿದ್ದ ವಾದವನ್ನೂ ಮೊಟಕುಗೊಳಿಸಲಾಗಿದೆ ಎಂದೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ, ಪೊಲೀಸರ ಕ್ರಮದ ಕುರಿತು ತನಿಖೆ ನಡೆಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಸಲ್ಲಿಸಲಾದ ಮತ್ತೊಂದು ಅರ್ಜಿಯ ಬಗ್ಗೆಯೂ ಈ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಜಂತರ್ ಮಂತರ್ ಪ್ರತಿಭಟನೆಯ ಕುರಿತು ಮುಖ್ಯ ನ್ಯಾಯಮೂರ್ತಿನೀಡಿದ್ದಾರೆನ್ನಲಾದ ಹೇಳಿಕೆಗಳು ಹಾಗೂ ಭಾರತದ ಯುವಜನರನ್ನು ಜಿರಳೆಗಳಿಗೆ ಹೋಲಿಸಿದ್ದಾರೆಂಬ ಆರೋಪದ ಬಗ್ಗೆಯೂ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

