ನವದೆಹಲಿ: ಸರಕಾರವು ತನ್ನ ವಿವಿಧ ಪ್ರೋತ್ಸಾಹಕ ಯೋಜನೆಗಳ ಅಡಿಯಲ್ಲಿ ಅರ್ಹ ಎಥೆನಾಲ್ ಯೋಜನೆಗಳಿಗೆ ಈವರೆಗೆ 4,687 ಕೋಟಿ ರೂ. ಬಡ್ಡಿ ಸಹಾಯಧನವನ್ನು ಅನುಮೋದಿಸಿದೆ ಎಂದು ಸಹಾಯಕ ಪೆಟ್ರೋಲಿಯಂ ಸಚಿವ ಸುರೇಶ್ ಗೋಪಿ ಅವರು ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಳ ಅಡಿಯಲ್ಲಿ, ಹೊಸ ಡಿಸ್ಟಿಲರಿಗಳನ್ನು ಸ್ಥಾಪಿಸಲು ಅಥವಾ ಪ್ರಸ್ತುತ ಇರುವ ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಪಡೆದ ಸಾಲಗಳ ಮೇಲೆ ಸರಕಾರವು ಐದು ವರ್ಷಗಳ ಅವಧಿಗೆ ಶೇ.6 ಅಥವಾ ಸಾಲದಾತರು ವಿಧಿಸುವ ಬಡ್ಡಿ ದರದ ಶೇ.50 ರಷ್ಟು (ಯಾವುದು ಕಡಿಮೆಯೋ ಅದನ್ನು) ಬಡ್ಡಿ ಸಹಾಯಧನವಾಗಿ ಭರಿಸುತ್ತದೆ. 2022-23ರಿಂದೀಚೆಗೆ ಈ ಯೋಜನೆಯಡಿ ಹಣವನ್ನು ವಿತರಿಸುವ ನೋಡಲ್ ಸಂಸ್ಥೆಯಾದ ನಬಾರ್ಡ್‌ಗೆ ಸರಕಾರವು 2,075 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಗೋಪಿ ಹೇಳಿದರು.
ಒಎನ್‌ಜಿಸಿ ಮಂಗಳೂರಿನಲ್ಲಿ ನಿರ್ಮಿಸಲಿರುವ 17.5 ಲಕ್ಷ ಮೆ.ಟನ್ ಸಾಮರ್ಥ್ಯದ ಪೆಟ್ರೋಲಿಯಂ ಮೀಸಲಿನ ಪೈಕಿ ಅರ್ಧದಷ್ಟನ್ನು ವ್ಯೂಹಾತ್ಮಕ ಬಳಕೆಗಾಗಿ ಕಾಯ್ದಿರಿಸಲಾಗುವುದು ಎಂದೂ ಸಚಿವರು ತಿಳಿಸಿದರು.

