ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಕಲದಾರ ತಾಲೂಕಿನ ಡೋಮಾ ಗ್ರಾಮದಲ್ಲಿರುವ ಸರ್ಕಾರಿ ಬುಡಕಟ್ಟು ವಸತಿ ಶಾಲೆಯಲ್ಲಿ ದೆವ್ವದ ಕಾಟ ಇದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳು ವಸತಿ ನಿಲಯವನ್ನು ತೊರೆದು ಸ್ವಗ್ರಾಮಗಳಿಗೆ ತೆರಳಿದ್ದಾರೆ.
ಜುಲೈ 22 ರಂದು ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಹಠಾತ್ತಾಗಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ವಿದ್ಯಾರ್ಥಿನಿಯರು ಅತಿಯಾಗಿ ಅಳುವುದು ಮತ್ತು ಜೋರಾಗಿ ನಗುವುದನ್ನು ಕಂಡ ಸಹಪಾಠಿಗಳು ಭಯ ಭೀತರಾಗಿದ್ದರು. ಇದರ ಬೆನ್ನಲ್ಲೇ, ಕೆಲ ಹೆಣ್ಣುಮಕ್ಕಳು ರಾತ್ರಿ ವೇಳೆ ಕಾಲಿನ ಗೆಜ್ಜೆ ಶಬ್ಧ ಕೇಳಿಸುತ್ತಿದೆ ಎಂದು ಹೇಳಿಕೊಂಡಿದ್ದು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತು.
ಈ ಘಟನೆಯ ನಂತರ ಶಾಲೆಯಲ್ಲಿದ್ದ ಒಟ್ಟು 810 ವಿದ್ಯಾರ್ಥಿಗಳಲ್ಲಿ ಸುಮಾರು 600 ಮಂದಿ ಭಯದಿಂದ ಹಾಸ್ಟೆಲ್ ಖಾಲಿ ಮಾಡಿದ್ದಾರೆ.
ಮೂಢನಂಬಿಕೆ ವದಂತಿಗಳು
ವಸತಿ ಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರಲ್ಲಿ ಈ ಕುರಿತು ಹಲವು ವದಂತಿಗಳು ಹರಿದಾಡುತ್ತಿವೆ. ಶಾಲೆಯ ಆವರಣದಲ್ಲಿದ್ದ ಮಹುವಾ (ಹಿಪ್ಪೆ) ಮರವನ್ನು ಆಡಳಿತ ಮಂಡಳಿ ಕಡಿದುಹಾಕಿದ್ದರಿಂದ, ಅದರಲ್ಲಿದ್ದ ಆತ್ಮಗಳು ಕೋಪಗೊಂಡು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿವೆ ಎಂಬ ನಂಬಿಕೆ ಒಂದೆಡೆ ಆದರೆ ಮತ್ತೊಂದೆಡೆ ಶಾಲೆಯ ಚರಂಡಿ ಮಾರ್ಗವು ಹಿಂಭಾಗದಲ್ಲಿರುವ ಸ್ಥಳೀಯ ದೇವಾಲಯಕ್ಕೆ ಅಡಚಣೆ ಉಂಟುಮಾಡಿದ್ದರಿಂದ ದೇವರಿಗೆ ಕೋಪ ಬಂದಿದೆ ಎಂಬ ಕಥೆ. ಸಮೀಪದ ಹೊಲದಲ್ಲಿ ಇತ್ತೀಚೆಗೆ ಮೃತಪಟ್ಟ ಬುಡಕಟ್ಟು ಯುವಕನ ಆತ್ಮವು ಶಾಲೆಯ ಸುತ್ತಲೂ ಅಲೆಯುತ್ತಿದೆ ಎಂಬ ವದಂತಿ ಹರಿದಾಡಿದೆ.
ಆರೋಗ್ಯ ಇಲಾಖೆ ಹಾಗೂ ತಜ್ಞರ ಸ್ಪಷ್ಟನೆ
ಘಟನೆ ವರದಿಯಾಗುತ್ತಿದ್ದಂತೆ ಇಲಾಖೆಯ ವೈದ್ಯಕೀಯ ತಂಡ ಮತ್ತು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದು ಯಾವುದೇ ರೀತಿಯ ರಹಸ್ಯಾತ್ಮಕ ಅಥವಾ ಅಲೌಕಿಕ ಘಟನೆಯಲ್ಲ. ತೀವ್ರ ಮಾನಸಿಕ ಒತ್ತಡದಿಂದ ಉಂಟಾಗುವ 'ಮಾಸ್ ಹಿಸ್ಟೀರಿಯಾ' (Mass Hysteria) ಅಥವಾ ಮಾಸ್ ಸೈಕೋಜೆನಿಕ್ ಇಲ್ನೆಸ್ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೌನ್ಸೆಲಿಂಗ್
ಸ್ಥಳೀಯ ಜನಪ್ರತಿನಿಧಿಗಳು, ಶಾಲೆಯ ಮುಖ್ಯೋಪಾಧ್ಯಾಯ ಸಂಜಯ್ ಚೌಧರಿ ಹಾಗೂ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸದಸ್ಯರು ಈ ಘಟನೆ ಸಂಬಂಧ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವೈಜ್ಞಾನಿಕ ಅರಿವು ಮೂಡಿಸಲು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ಮರಳಿ ಶಾಲೆಗೆ ಆಗಮಿಸುವಂತೆ ಮನವಿ ಮಾಡಲಾಗಿದೆ.

