ಢಾಕಾ: 'ನಮ್ಮ ಮಧ್ಯೆ ಸಮಸ್ಯೆಗಳಿವೆ. ಅದರಲ್ಲಿ ಅನುಮಾನವೇ ಬೇಡ. ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು' ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಅಭಿಪ್ರಾಯಪಟ್ಟರು.
ಬಾಂಗ್ಲಾದೇಶದಲ್ಲಿರುವ ಐರ್ಲೆಂಡ್‌ನ ರಾಜತಾಂತ್ರಿಕ ಅಧಿಕಾರಿ ಮಸೂದ್ ಜಮೀಲ್ ಖಾನ್ ಮತ್ತು ಅವರ ಪತ್ನಿ ಕೇಟ್ ಜರೊ ಖಾನ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ದಿನೇಶ್ ಮಾತನಾಡಿದರು.
'ಬಾಂಗ್ಲಾ ಪ್ರಧಾನಿ ತಾರೀಕ್ ರೆಹಮಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳುವ ನಾಯಕರು. ಇವರಿಬ್ಬರು ಒಮ್ಮೆ ಭೇಟಿಯಾದರೆ, ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ' ಎಂದರು.
'ತಾರೀಕ್ ಅವರು ಭಾರತಕ್ಕೆ ಭೇಟಿ ನೀಡಬೇಕು ಎಂದಾದರೆ, ಭಾರತವು ಅಂಥ ವಾತಾವರಣ ಸೃಷ್ಟಿಸಬೇಕು' ಎಂದು ಬಾಂಗ್ಲಾ ವಿದೇಶಾಂಗ ವಕ್ತಾರ ಎ.ಕೆ.ಎಂ ಶಾಹಿದುಲ್ ಕರೀಮ್ ಹೇಳಿದ್ದರು. ಈ ಬಳಿಕ, ದಿನೇಶ್ ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ಸೆ. 12, 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗದಲ್ಲಿ ತಾರೀಕ್ ಅವರು ಭಾಗವಹಿಸುವ ಸಾಧ್ಯತೆ ಇದೆ. ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ಆಗಸ್ಟ್ 5ರಂದು ನಡೆಸಿದ ಮಾಧ್ಯಮಗೋಷ್ಠಿ ಕೂಡ ಎರಡೂ ದೇಶಗಳ ಸಂಬಂಧದಲ್ಲಿ ಇನ್ನಷ್ಟು ಬಿರುಕು ಮೂಡಿಸಿದೆ.

