ಮುಂಬೈ: ₹ 88 ಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಶಾಖಾಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತಕ್ಕೆ ಗಡೀಪಾರು ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ಸಿಬಿಐ ಈ ಕಾರ್ಯಾಚರಣೆ ನಡೆಸಿದ್ದು ಈ ತನಿಖಾ ಸಂಸ್ಥೆಯ ಮನವಿಯಂತೆ ಇಂಟರ್‌ಪೋಲ್ ಮೂಲಕ ಆಕೆಯ ವಿರುದ್ಧ 'ರೆಡ್ ಕಾರ್ನರ್ ನೋಟಿಸ್' ಜಾರಿಗೊಳಿಸಲಾಗಿತ್ತು.
ಏನಿದು ಪ್ರಕರಣ?
ವಿಶಾಖಾ ರಾಥೋಡ್ ಹಾಗೂ ಆಕೆಯ ಪತಿ ಅವಿನಾಶ್ ರಾಥೋಡ್ ಸಾರ್ವಜನಿಕರಿಂದ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ಮಾಡಿಸಿ ದುಪ್ಪಟ್ಟು ಕೊಡುವುದಾಗಿ ನಂಬಿಸಿ ಸುಮಾರು ₹88 ಕೋಟಿ ಸಂಗ್ರಹಿಸಿದ್ದರು. ಹೂಡಿಕೆದಾರರ ಹಣವನ್ನು ವಿವಿಧ ಬ್ಯಾಂಕ್ ಹಾಗೂ ಡಿಮ್ಯಾಟ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪದ ಮೇಲೆ ಮಹಾರಾಷ್ಟ್ರದಲ್ಲಿ ದೂರು ದಾಖಲಾಗಿತ್ತು.
ಈ ಘಟನೆ ಬಳಿಕ ಅವಿನಾಶ್ ಮತ್ತು ವಿಶಾಖಾ ಯುಎಇಯಲ್ಲಿ ತಲೆಮರೆಸಿಕೊಂಡಿದ್ದರು. ಜೂನ್ 4ರಂದು ಅವಿನಾಶ್ ಮತ್ತು ವಿಶಾಖಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಈ ನೋಟಿಸ್ ಆಧರಿಸಿ ಯುಎಇ ಅಧಿಕಾರಿಗಳು ಅವಿನಾಶ್‌ನನ್ನು ಬಂಧಿಸಿ ಜುಲೈ 23ರಂದು ಭಾರತಕ್ಕೆ ಹಸ್ತಾಂತರ ಮಾಡಿದ್ದರು.
ಯುಎಇಯಲ್ಲಿದ್ದ ವಿಶಾಖಾಳನ್ನು ಇಲ್ಲಿನ ಪೊಲೀಸರು ಮಂಗಳವಾರ (ಆ.3)ದಂದು ಗಡೀಪಾರು ಮಾಡಿದ್ದರು. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶಾಖಾಳನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದರು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019 ರಿಂದ 2026ರ ಜುಲೈವರೆಗೆ ವಿವಿಧ ಅಪರಾಧ ಕೃತ್ಯಗಳನ್ನು ಎಸಗಿ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ 274 ಜನರನ್ನು 36 ದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

