ಲಖನೌ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನವಾಗಿದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಅಲ್ಲಿನ ಸಂತರ ಕೈವಾಡ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಎಸ್‌ಐಟಿ ನೀಡಿರುವ ಮಧ್ಯಂತರ ವರದಿಯಲ್ಲಿ ಸಂತರ ಕೈವಾಡ ಇಲ್ಲ ಎನ್ನುವುದು ಸಾಬೀತಾಗಿದೆ.
ದೇಣಿಗೆ ಕಳ್ಳತನ ಮಾಡಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಸತ್ಯವನ್ನು ತಿಳಿದುಕೊಳ್ಳದೆ ಸಂತರ ವಿರುದ್ಧ ಆರೋಪ ಮಾಡಿದ್ದು ಆಶ್ಚರ್ಯ ತಂದಿದೆ. ಇದೀಗ ಎಸ್‌ಐಟಿ ತನಿಖೆಯ ವೇಳೆ ಸಂತರು ಇದರಲ್ಲಿ ಭಾಗಿಯಾಗಿಲ್ಲ ಎನ್ನುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ರಾಮಮಂದಿರ ಟ್ರಸ್ಟ್ ರಚಿಸಲಾಗಿದೆ. ಅದರ ಕಾರ್ಯಗಳಲ್ಲಿ ರಾಜ್ಯ ಸರ್ಕಾರವು ಹಸ್ತಕ್ಷೇಪ ಮಾಡಿಲ್ಲ. ಒಂದು ವೇಳೆ ಟ್ರಸ್ಟ್ ಏನಾದರೂ ಮನವಿ ಮಾಡಿದರೆ ಅಥವಾ ಸುಪ್ರೀಂ ಕೋರ್ಟ್‌ನಿಂದ ಏನಾದರೂ ಸೂಚನೆ ಬಂದರೆ ಮಾತ್ರ ಸರ್ಕಾರವು ಮಧ್ಯಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ 8 ಜನರನ್ನು ಬಂಧಿಸಲಾಗಿದೆ. ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

