ಅಲಾಸ್ಕಾ: ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ ವಿಮಾನವೊಂದು ಗುರುವಾರ ಪಶ್ಚಿಮ ಅಲಾಸ್ಕಾದ ಸಮೀಪ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಹಾಗೂ ಆರು ಮಂದಿ ಪ್ರಯಾಣಿಕರು ಇದ್ದರು' ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (ಎನ್‌ಟಿಎಸ್‌ಬಿ) ಅಲಾಸ್ಕಾ ಪ್ರಾದೇಶಿಕ ಮುಖ್ಯಸ್ಥ ಕ್ಲಿಂಟ್ ಜಾನ್ಸನ್ ಮಾಹಿತಿ ನೀಡಿದ್ದಾರೆ.
ಆದರೆ, ವಿಮಾನದಲ್ಲಿದ್ದವರ ಸದ್ಯದ ಸ್ಥಿತಿಯ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆಂಕರೇಜ್‌ನಿಂದ ಟೇಕ್‌ಆಫ್ ಆಗಿದ್ದ ವಿಮಾನವು ಗುರುವಾರ ಮಧ್ಯಾಹ್ನ ಕೇಪ್ ನ್ಯೂವೆನ್‌ಹ್ಯಾಮ್ ತಲುಪುತ್ತಿದ್ದ ವೇಳೆ ಪತನಗೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಮಾತ್ರ ಲಭ್ಯವಿದ್ದು, ಅಲಾಸ್ಕಾ ರಕ್ಷಣಾ ಸಮನ್ವಯ ಕೇಂದ್ರವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಜಾನ್ಸನ್ ತಿಳಿಸಿದ್ದಾರೆ.
ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.

