HEALTH TIPS

ಭಾರತಕ್ಕೆ ಚೀನಾವೇ ದೀರ್ಘಕಾಲೀನ ಪ್ರತಿಸ್ಪರ್ಧಿ: ಮಾಜಿ ಸೇನಾ ಮುಖ್ಯಸ್ಥ ನರವಣೆ

 ಪುಣೆ: 'ನಿರಂತರ ಭಯೋತ್ಪಾದನಾ ಬೆದರಿಕೆಯಿಂದಾಗಿ ಭಾರತದ ಗಮನ ಪಾಕಿಸ್ತಾನದ ಮೇಲೆ ಹೆಚ್ಚಾಗಿದೆ. ಆದರೆ, ದೀರ್ಘಾವಧಿಯಲ್ಲಿ ಹಲವು ವಲಯಗಳಲ್ಲಿ ಚೀನಾವೇ ಭಾರತಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ' ಎಂದು ಮಾಜಿ ಸೇನಾ ಮುಖ್ಯಸ್ಥ, ಜನರಲ್ ಮನೋಜ್ ನರವಣೆ ಗುರುವಾರ ಅಭಿಪ್ರಾಯಪಟ್ಟಿದ್ದಾರೆ. 


ಚೀನಾವನ್ನು 'ಶತ್ರು' ಎಂದು ಬಣ್ಣಿಸಲು ನಿರಾಕರಿಸಿದ ಅವರು, ಬೀಜಿಂಗ್ ಜೊತೆಗಿನ ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಜೊತೆಗೆ ಮಿಲಿಟರಿ ಬಲ ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿರುವ ತಮ್ಮ ಹೊಸ ಪುಸ್ತಕ 'ದಿ ಕ್ಯೂರಿಯಸ್ ಆಯಂಡ್‌ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್ ಮಿಲಿಟರಿ ಮಿಥ್ಸ್ ಆಯಂಡ್‌ ಮಿಸ್ಟರೀಸ್' ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನೆರೆಹೊರೆಯ ದೇಶಗಳಿಂದ ಭಾರತ ಎದುರಿಸುತ್ತಿರುವ ಭದ್ರತಾ ಸವಾಲುಗಳ ಕುರಿತು ಪ್ರಸ್ತಾಪಿಸಿದ್ದಾರೆ.

'ಪಾಕಿಸ್ತಾನ ಮತ್ತು ಚೀನಾ ವಿಭಿನ್ನ ಆಯಾಮಗಳನ್ನು ಹೊಂದಿವೆ. ನಾವು ಎರಡೂ ದೇಶಗಳೊಂದಿಗೆ ಯುದ್ಧಗಳನ್ನು ಎದುರಿಸಿದ್ದೇವೆ ಮತ್ತು ಬಗೆಹರಿಯದ ಗಡಿ ಸಮಸ್ಯೆಗಳನ್ನು ಹೊಂದಿದ್ದೇವೆ. ಹಾಗಾಗಿ, ಈ ಎರಡೂ ದೇಶಗಳು ಸದಾ ಭದ್ರತಾ ಸವಾಲಾಗಿ ನಮ್ಮ ರೇಡಾರ್‌ನಲ್ಲಿರುತ್ತವೆ' ಎಂದಿದ್ದಾರೆ.

'ನಾವು ಪಾಕಿಸ್ತಾನ ವಿರುದ್ದ ಪ್ರಮುಖ ಯುದ್ಧಗಳಲ್ಲಿ ಹೋರಾಡಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದರಿಂದ ನಮ್ಮ ಗಮನ ಪಶ್ಚಿಮ ಗಡಿಯತ್ತ ಇದೆ. ಆದರೆ, ಮುಂದಿನ ದಿನಗಳಲ್ಲಿ ಮತ್ತು ದೀರ್ಘಾವಧಿಯಲ್ಲಿ ಚೀನಾ ನಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಸ್ಪಷ್ಟ. ನಾನು ಉದ್ದೇಶಪೂರ್ವಕವಾಗಿಯೇ ಚೀನಾವನ್ನು 'ಶತ್ರು' ಎನ್ನದೇ 'ಪ್ರತಿಸ್ಪರ್ಧಿ' ಎಂದು ಕರೆಯುತ್ತಿದ್ದೇನೆ' ಎಂದು ವಿವರಿಸಿದ್ದಾರೆ.

'ರಾಜಕೀಯ, ಆರ್ಥಿಕ, ವ್ಯಾಪಾರ ಹಾಗೂ ಸೇನಾ ಕ್ಷೇತ್ರ ಸೇರಿದಂತೆ ಹಲವು ರಂಗಗಳಲ್ಲಿ ಚೀನಾ ಭಾರತಕ್ಕೆ ಸ್ಪರ್ಧೆ ಒಡ್ಡಲಿದೆ. ಸ್ಪರ್ಧೆ ಇರುವಲ್ಲಿ ಸಣ್ಣಪುಟ್ಟ ಸಂಘರ್ಷಗಳು ಸಹಜ. ಆದರೆ, ಅಂತಹ ಸಂಘರ್ಷಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲು ನಾವು ಪ್ರಯತ್ನಿಸಬೇಕು. ಸೇನಾ ಬಳಕೆಯು ಕೊನೆಯ ಆಯ್ಕೆಯಾಗಿರಬೇಕು' ಎಂದಿದ್ದಾರೆ.

'ಇದೇ ವೇಳೆ ಯಾವುದೇ ಸಂಭಾವ್ಯ ದಾಳಿಯನ್ನು ತಡೆಯಲು ಭಾರತ ಸದಾ ಮಿಲಿಟರಿ ಸನ್ನದ್ಧತೆಯನ್ನು ಕಾಯ್ದುಕೊಳ್ಳಬೇಕು' ಎಂದು ಅವರು ಪ್ರತಿಪಾದಿಸಿದ್ದಾರೆ.

'ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಸೇರಿದಂತೆ ನೆರೆಯ ದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಭಾರತ ಯತ್ನಿಸಬೇಕು. ನಿಜ ಜೀವನದಲ್ಲಾಗಲಿ ಅಥವಾ ಜಾಗತಿಕ ರಾಜಕೀಯದಲ್ಲಾಗಲಿ ನಮಗೆ ಬೇಕಾದಂತೆ ನೆರೆಹೊರೆಯವರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇರುವ ಪರಿಸ್ಥಿತಿಯಲ್ಲೇ ಉತ್ತಮವಾದುದ್ದನ್ನು ಸಾಧಿಸಬೇಕು' ಎಂದಿದ್ದಾರೆ.

ನರವಣೆ ಅವರು 2019ರ ಡಿಸೆಂಬರ್ 31ರಿಂದ 2022ರ ಏಪ್ರಿಲ್ 30ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು.

ಜನರಲ್ ಮನೋಜ್ ನರವಣೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries