ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದಲ್ಲಿ ಕೀರಿಕ್ಕಾಡು ಮಾಸ್ತರರ ಪ್ರಾರಂಭಕಾಲದ ಶಿಷ್ಯರಾಗಿದ್ದ ಯಕ್ಷಗಾನ ಅರ್ಥಧಾರಿ, ವೇಷಧಾರಿ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 20 ನೇ ವರ್ಷದ ಸಂಸ್ಮರಣೆ ಮತ್ತು ದೇಲಂಪಾಡಿ ಮಹಾಲಿಂಗ ಪಾಟಾಳಿ - ಸೀತಮ್ಮ ಸ್ಮೃತಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಆ. 08 ರಂದು ಸಂಜೆ 6. ರಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ.
ಶ್ರೀಮದ್ಭಗವದ್ಗೀತಾ ಪಾರಾಯಣ ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪೂಜೆಯ ಬಳಿಕ ಸಂಜೆ 6.30 ಕ್ಕೆ ಪ್ರಾರಂಭವಾಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯ, ಸಾಹಿತಿ ಮತ್ತು ಕಲಾವಿದ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಮಂಜೇಶ್ವರ ವಹಿಸಲಿದ್ದಾರೆ. ಬಣ್ಣದ ಮಹಾಲಿಂಗ ಯಕ್ಷಪ್ರತಿಷ್ಠಾನ ರಿ. ಪುತ್ತೂರು ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅವರು ದೇಲಂಪಾಡಿ ಮಹಾಲಿಂಗ ಪಾಟಾಳಿಯವರ ಸಂಸ್ಮರಣೆ ಮಾಡಲಿರುವರು. ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದ ದೇಲಂಪಾಡಿ ಬಾಲಕೃಷ್ಣ ಗೌಡರಿಗೆ ದೇಲಂಪಾಡಿ ಮಹಾಲಿಂಗ ಪಾಟಾಳಿ - ಸೀತಮ್ಮ ಸ್ಮೃತಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ನಿವೃತ್ತ ಮುಖ್ಯೋಪಾಧ್ಯಾಯ, ಕಲಾವಿದ ದೇಲಂಪಾಡಿ ರಾಮಣ್ಣ ಮಾಸ್ತರ್ ಅವರು ಅಭಿನಂದನ ಭಾಷಣ ಮಾಡಲಿರುವರು. ಯಕ್ಷಗಾನ ಭಾಗವತಿಕೆಯ ಗುರುಗಳಾದ ವಿಶ್ವವಿನೋದ ಬನಾರಿ ಉಪಸ್ಥಿತರಿರುವರು. ರಾತ್ರಿ 7.30 ರಿಂದ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀಕೃಷ್ಣ ರಾಯಭಾರ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

-mahalinga%20patali.jpg)

