ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ 18ನೇ ವಾರ್ಡು ವ್ಯಾಪ್ತಿಯ ಪಡಿಯಡ್ಪು ಪರಿಶಿಷ್ಟ ಜಾತಿ ಕಾಲನಿಯ ನಿವಾಸಿ, ಕೂಲಿ ಕಾರ್ಮಿಕ ಸುರೇಶ್ ಅವರಿಗೆ ತನ್ನ 37ನೇ ವಯಸ್ಸಿನಲ್ಲಿ ಆಧಾರ್ ಕಾರ್ಡ್ ಹಾಗೂ ಚುನಾವಣಾ ಗುರುತು ಚೀಟಿ ಲಭಿಸಿದೆ. ವಾರ್ಡು ಸದಸ್ಯೆ ಹಾಗೂ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಅವರ ನೇತೃತ್ವದಲ್ಲಿ ನಡೆಸಿದ ನಿರಂತರ ಪರಿಶ್ರಮದ ಫಲವಾಗಿ ಇವು ಲಭಿಸಿದೆ. ಬದಿಯಡ್ಕ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುಮಾರ್ ಅವರು ಆಧಾರ್ ಕಾರ್ಡ್ ಹಾಗೂ ಐಡಿ ಕಾರ್ಡುಗಳನ್ನು ಸುರೇಶ್ ಅವರಿಗೆ ಹಸ್ತಾಂತರಿಸಿದರು.
ಶಾಲಾ ಪ್ರಮಾಣಪತ್ರ ಮಾತ್ರ ಹೊಂದಿದ್ದ ಸುರೇಶ್ ಅವರ ಹೆಸರು ಪಡಿತರ ಚೀಟಿಯಲ್ಲಿ ಸೇರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಆಧಾರ್ ಕಾರ್ಡ್, ಐಡಿ ಕಾರ್ಡು ಲಭಿಸಿರಲಿಲ್ಲ. ಈ ದಾಖಲೆ ಪತ್ರಗಳು ಇಲ್ಲದ ಕಾರಣ ಸುರೇಶ್ ಅವರು ಈ ವರೆಗೆ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ. ದಾಖಲೆಗಳಿಲ್ಲದ ಕಾರಣ ಸರ್ಕಾರದ ಸವಲತ್ತುಗಳೂ ಇವರಿಗೆ ಲಭಿಸಿರಲಿಲ್ಲ. ಕಳೆದ ಪಂಚಾಯಿತಿ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ ರಜನಿ ಸಂದೀಪ್ ಅವರು ಸುರೇಶ್ ಅವರ ಮಾಹಿತಿಯನ್ನು ತಿಳಿದು ಅದಕ್ಕಾಗಿ ಸ್ಪಂದಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅವರ ಸಹಕಾರದೊಂದಿಗೆ ಬಿ.ಎಲ್.ಒ ಮೂಲಕ ಶಾಲಾ ಪ್ರಮಾಣಪತ್ರ ಮೂಲಕವೇ ಅರ್ಜಿ ಸಲ್ಲಿಸಿ ಐಡಿ ಕಾರ್ಡು ಹಾಗೂ ಆಧಾರ್ ಕಾರ್ಡು ಪಡೆಯಲಾಯಿತು. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಸುರೇಶ್ ಅವರು ಮತದಾನ ಮಾಡಲಿದ್ದಾರೆ. ಗೆದ್ದು ಬಂದ ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಜನಪ್ರತಿನಿಧಿ ರಜನಿ ಸಂದೀಪ್ ಅವರನ್ನು ವಾರ್ಡಿನ ಜನತೆ ಶ್ಲಾಘಿಸಿದ್ದಾರೆ.

.jpg)
.jpg)
