ನವದೆಹಲಿ/ಮುಂಬೈ/ತಾರಾಪೀಠ: ದೇಶದ ವಿವಿಧೆಡೆ ಸೋಮವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ತಾರಾಪೀಠದ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಗೆ ಏಳು ಮಂದಿ ಮೃತಪಟ್ಟಿದ್ದಾರೆ. ದೆಹಲಿ ಗೋದಾಮೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಇ-ರಿಕ್ಷಾ ಬ್ಯಾಟರಿ ಸ್ಫೋಟದ ಬೆಂಕಿ ಉದ್ಭವಿಸಿದೆ ಎಂದು ಶಂಕಿಸಲಾಗಿದೆ.
ಮುಂಬೈನ ಕಾಂದಿವಲಿಯಲ್ಲಿ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ.
ಕಳಪೆ ಕಾಮಗಾರಿ ವಿಳಂಬದಿಂದ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶತಾರಾಪೀಠದಲ್ಲಿ 7 ಮಂದಿ ಸಾವು
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ತಾರಾಪೀಠದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್‌ನಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಹುತೇಕ ಅತಿಥಿಗಳು ನಿದ್ರಿಸುತ್ತಿದ್ದ ವೇಳೆಯೇ ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಗಾಯಗೊಂಡವರನ್ನು ರಾಮ್‌ಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಐವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಬಳಿಕ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. 'ಇದ್ದಕ್ಕಿದ್ದಂತೆ ಇಡೀ ಹೋಟೆಲ್ ಹೊಗೆಯಿಂದ ಆವೃತವಾಯಿತು. ಉಸಿರಾಡಲು ಸಾಧ್ಯವಾಗಲಿಲ್ಲ. ಹೊರಗೆ ಹೋಗುವ ದಾರಿಯನ್ನೂ ಹುಡುಕುವುದು ಕಷ್ಟವಾಗಿತ್ತು' ಎಂದು ಬೆಂಕಿಯಿಂದ ಪಾರಾದ ಕೋಲ್ಕತ್ತಾದ ಮಹಿಳೆಯೊಬ್ಬರು ಹೇಳಿದ್ದಾರೆ.
ಮೃತರು ಮತ್ತು ಗಾಯಗೊಂಡವರಲ್ಲಿ ತಾರಾಪೀಠದ ಪ್ರಸಿದ್ಧ ಕಾಳಿ ದೇಗುಲಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಕೆಲವು ಯಾತ್ರಿಕರೂ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಇ-ರಿಕ್ಷಾ ಬ್ಯಾಟರಿ ಸ್ಫೋಟದ ಶಂಕೆ
ಪಶ್ಚಿಮ ದೆಹಲಿಯ ರಘುಬೀರ್ ನಗರದಲ್ಲಿ ಗೋದಾಮೊಂದರಲ್ಲಿ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇ-ರಿಕ್ಷಾದ ಬ್ಯಾಟರಿ ಸ್ಫೋಟಗೊಂಡು ದುರಂತ ಸಂಭವಿಸಿದೆ ಎನ್ನಲಾಗಿದೆ.
ಗುರುದ್ವಾರ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮುಂಜಾನೆ 4.42ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಮೊದಲ ಮಹಡಿಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಸುಟ್ಟ ಗಾಯಗಳಾಗಿದ್ದ ಗುರು ಗೋಬಿಂದ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಳಿಗ್ಗೆ 5.25ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಬ್ಯಾಟರಿ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತರ ಗುರುತು ಮತ್ತು ಆಸ್ತಿ ನಷ್ಟದ ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.
ಮುಂಬೈನಲ್ಲಿ 11 ಮಂದಿ ರಕ್ಷಣೆ
ಮುಂಬೈನ ಕಾಂದಿವಲಿ ಸ್ಟೇಷನ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಮುಂಜಾನೆ 4.14ಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ, ಎರಡನೇ ಮಹಡಿಯಲ್ಲಿರುವ ವಸತಿ ಗೃಹದಿಂದ ಅಗ್ನಿಶಾಮಕ ಸಿಬ್ಬಂದಿ ಮೆಟ್ಟಿಲುಗಳ ಮೂಲಕ 11 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ನಾಲ್ಕು ಅಗ್ನಿಶಾಮಕ ವಾಹನಗಳು ಸೇರಿದಂತೆ ಹಲವು ವಾಹನಗಳನ್ನು ಕಾರ್ಯಾಚರಣೆಗೆ ಬಳಸಲಾಗಿದ್ದು, ಬೆಳಿಗ್ಗೆ 6.07ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಗೆ ಕಾರಣದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

