ಕಠ್ಮಂಡು (PTI): ನೇಪಾಳದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ. 2,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹಲವು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರವಾಹಪೀಡಿತ ಪ್ರದೇಶದಿಂದ 8,730 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಾಪತ್ತೆಯಾದವರಲ್ಲಿ 238 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ಇದ್ದಾರೆ ಎಂದು ನೇಪಾಳದ ಶಿಕ್ಷಣ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ನದಿ ನೀರಿನ ಮಟ್ಟ ಏರಿಕೆ:
ಬೋಟೆಕೋಶಿ ನದಿಯ ನೀರಿನಮಟ್ಟ ಭಾನುವಾರ ಮತ್ತೆ ಏರಿಕೆಯಾಗಿದ್ದು, ಪ್ರವಾಹಪೀಡಿತ ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ದಿಢೀರ್ ಪ್ರವಾಹದಿಂದ 354 ಮೆಗಾವಾಟ್ ಸಾಮರ್ಥ್ಯದ ಎಂಟು ಜಲ ವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ನಿರ್ಮಾಣ ಹಂತದ ಐದು ಯೋಜನೆಗಳು ಸಹ ನಾಶವಾಗಿವೆ ಎಂದು ವರದಿಯಾಗಿದೆ. ಈ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಸಿಲುಕಿಕೊಂಡ ಸಾಧ್ಯತೆ ಇರುವ ಕಾರಣ, ನೇಪಾಳ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. 191 ಕಾರ್ಮಿಕರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.
ಆಸ್ಪತ್ರೆಗಳ ಮುಂದೆ ಕುಟುಂಬಸ್ಥರ ತೊಳಲಾಟ
ದುರಂತ ಉಂಟಾಗಿ ನಾಲ್ಕು ದಿನಗಳು ಕಳೆದಿದ್ದು ನಾಪತ್ತೆಯಾದವರ ಫೋಟೊ ಮತ್ತು ಮಾಹಿತಿಯನ್ನು ಹಿಡಿದು ಅಸಂಖ್ಯಾತ ಕುಟುಂಬಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿವೆ.
ವಿಧಿವಿಜ್ಞಾನ ತಂಡಗಳು ಮೃತದೇಹಗಳ ಪತ್ತೆ ಕಾರ್ಯದಲ್ಲಿ ತೊಡಗಿವೆ. ಆಸ್ಪತ್ರೆ ಎದುರು ನಿಂತ ಕುಟುಂಬಗಳ ನೋವು ಮನಕಲಕುವಂತಿದೆ.
ತ್ರಿಭುವನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಹೊರಗೆ ನಿಂತ ಕುಟುಂಬಗಳನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರನ್ನು ಮಹಿಳೆಯೊಬ್ಬರು 'ನಿಮ್ಮ ಕ್ಯಾಮೆರಾಗಳು ನಮ್ಮವರನ್ನು ವಾಪಸ್ ತಂದುಕೊಡುತ್ತವೆಯೇ' ಎಂದು ಪ್ರಶ್ನಿಸಿದ್ದು ಅವರ ನೋವಿನ ತೀವ್ರತೆಯನ್ನು ಸಾರುತ್ತಿತ್ತು. ದಿಲ್ ಕುಮಾರಿ ಮರ್ಸಂಗಿ ಎಂಬವರು ತಮ್ಮ ಸಂಬಂಧಿಕರ ಫೋಟೊವನ್ನು ಹಿಡಿದು ಆಸ್ಪತ್ರೆ ಗೇಟಿನ ಬಳಿ ಕಾದು ಕುಳಿತಿದ್ದರು. 'ಭರವಸೆಯೊಂದು ಬಿಟ್ಟರೆ ಬೇರೇನೂ ಇಲ್ಲ' ಎಂದು ವಿಷಾದದಿಂದ ಹೇಳಿದರು.
- ಪ್ರಮುಖ ಬೆಳವಣಿಗೆ
*ತಮಿಳುನಾಡಿನಿಂದ ನೇಪಾಳಕ್ಕೆ ತೆರಳಿದ್ದ 319 ಜನರ ಪೈಕಿ ಸುಮಾರು 100 ಜನರ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ ಎಂದು ರಾಜ್ಯ ಸಚಿವ ಎ.ರಾಜಮೋಹನ್ ತಿಳಿಸಿದ್ದಾರೆ.
*ಕಠ್ಮಂಡುನಲ್ಲಿ ಸಿಲುಕಿದ್ದ ನಾಗ್ಪುರದ 102 ಯಾತ್ರಾರ್ಥಿಗಳು ಸುರಕ್ಷಿತವಾಗಿ ಮಹಾರಾಷ್ಟ್ರಕ್ಕೆ ಭಾನುವಾರ ಮರಳಿದ್ದಾರೆ.
*ನೋರ್ಕಾ ರೂರ್ಟ್ ಸಹಾಯವಾಣಿ ಸಂಪರ್ಕಿಸಿದ್ದ ತಮಿಳುನಾಡಿನ 52 ಜನರ ಪೈಕಿ 45 ಮಂದಿ ಸುರಕ್ಷಿತವಾಗಿದ್ದಾರೆ. ಉಳಿದ ಏಳು ಜನರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅನಿವಾಸಿ ಕೇರಳೀಯರ ಸಂಘ (ನೋರ್ಕಾ ರೂಟ್ಸ್) ತಿಳಿಸಿದೆ. ನೋರ್ಕಾ ಕೇರಳಂ ಸರ್ಕಾರದ ಸಂಸ್ಥೆಯಾಗಿದೆ.
* ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮುಂಬೈ ವೈದ್ಯ-ಪರ್ವತಾರೋಹಿ ಮಿಲಿಂದ್ ಚಿಟ್ಲೆ ಮತ್ತು ಅವರ ಪತ್ನಿ ನಾಪತ್ತೆಯಾಗಿದ್ದು ಅವರ ಮರಳುವಿಕೆಗೆ ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ.

