ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ, ತಮ್ಮಿಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆಂದೇ ಭಾವಿಸಿ ಆಘಾತದಲ್ಲಿದ್ದ ತಾಯಿಯೊಬ್ಬರಿಗೆ ಇದೀಗ ಅವರ 8 ವರ್ಷದ ಮಗ ಪವಾಡಸದೃಶ ಎಂಬಂತೆ ಜೀವಂತವಾಗಿ ಸಿಕ್ಕ ಹೃದಯಸ್ಪರ್ಶಿ ಘಟನೆ ರಸುವಾ ಜಿಲ್ಲೆಯಲ್ಲಿ ನಡೆದಿದೆ.
ಲ್ಯಾಂಗ್‌ಟ್ಯಾಂಗ್ ಲಿರುಂಗ್ ಪರ್ವತದ ಬಳಿಯ ಹಿಮಬಂಡೆ ಕುಸಿದು ಉಂಟಾದ ಭೀಕರ ಪ್ರವಾಹ ಮತ್ತು ಕೆಸರು ಮಿಶ್ರಿತ ನೀರು ರಸುವಾ ಜಿಲ್ಲೆಯ ಶಾಲಾ-ಕಾಲೇಜುಗಳು, ಮನೆ ಹಾಗೂ ಮಾರುಕಟ್ಟೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸಗೊಳಿಸಿತ್ತು. ಈ ವೇಳೆ ಶಾಲೆಯಲ್ಲಿದ್ದ 8 ವರ್ಷದ ಬಾಲಕ 'ಜೋಯಲ್ ಗೇಲ್' ತನ್ನ ಗೆಳೆಯನೊಂದಿಗೆ ಹತ್ತಿರದ ಅರಣ್ಯಕ್ಕೆ ಓಡಿ ಮರವನ್ನೇರಿ ಪ್ರಾಣ ಉಳಿಸಿಕೊಂಡಿದ್ದಾನೆ.
ಈ ವೇಳೆ ಬಾಲಕನ ಬಲ ಕಾಲು ಮುರಿದಿದ್ದು, ಮುಖಕ್ಕೆ ತೀವ್ರ ಗಾಯಗಳಾಗಿದ್ದವು. ಆತನನ್ನು ರಕ್ಷಿಸಿದ ಪೊಲೀಸರು ಕಠ್ಮಂಡುವಿನ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಿದ್ದರು.
ತಾಯಿಯ ಅಸಹಾಯಕತೆ- ಪತ್ರಕರ್ತೆಯ ಸಹಾಯ:
ಇತ್ತ ಬಾಲಕನ ತಾಯಿ ಮಟ್ಟಿ ಮಾಯಾ ತಮಾಂಗ್ (28), ಪ್ರವಾಹಕ್ಕೆ ಸಿಲುಕಿ ಧ್ವಂಸಗೊಂಡಿದ್ದ ಶಾಲೆಯನ್ನು ನೋಡಿ, ತಮ್ಮ ಇಬ್ಬರೂ ಮಕ್ಕಳು ಕೊಚ್ಚಿಹೋಗಿದ್ದಾರೆ ಎಂದು ಭಾವಿಸಿ ದಿಗ್ಭ್ರಮೆಗೊಂಡಿದ್ದರು. ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿ ತಮ್ಮ ಮಕ್ಕಳ ಹೆಸರು ಪತ್ತೆಯಾಗದೆ ಕಣ್ಣೀರಲ್ಲಿ ಮುಳುಗಿದ್ದರು.
ಆದರೆ, ರಾಯಿಟರ್ಸ್ ಸುದ್ದಿ ಸಂಸ್ಥೆಯ ಪತ್ರಕರ್ತೆ 'ಸಹನಾ ಬಾಜ್ರಾಚಾರ್ಯ' ಅವರು ನುವಾಕೋಟ್‌ನ ಆಸ್ಪತ್ರೆಯಲ್ಲಿ ಒಂಟಿಯಾಗಿದ್ದ ಜೋಯಲ್‌ನನ್ನು ಭೇಟಿಯಾಗಿ, ಆತನ ವಿಡಿಯೊ ಚಿತ್ರೀಕರಿಸಿದ್ದರು. ಆಸ್ಪತ್ರೆಯಲ್ಲಿ ನೀಡಲಾಗಿದ್ದ ಪತ್ರಕರ್ತೆಯ ಸಂಪರ್ಕ ಸಂಖ್ಯೆಗೆ ತಮಾಂಗ್ ಕರೆ ಮಾಡಿದಾಗ, ಮಗ ಬದುಕಿರುವ ಸುದ್ದಿ ತಿಳಿದಿದೆ.
ಮತ್ತೆ ತಾಯಿ ಮಡಿಲು ಸೇರಿದ ಬಾಲಕ:
ತಕ್ಷಣವೇ ಕಠ್ಮಂಡುವಿಗೆ ಧಾವಿಸಿದ ತಮಾಂಗ್ ಆಸ್ಪತ್ರೆಯ ಮಂಚದ ಮೇಲಿದ್ದ ಹಿರಿಯ ಮಗ ಜೋಯಲ್‌ನನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದ್ದಾರೆ. ಇತ್ತ ಅದೃಷ್ಟವೆಂಬಂತೆ ತಮಾಂಗ್ ಅವರ ಕಿರಿಯ ಮಗನೂ ಜೀವಂತವಾಗಿ ಪತ್ತೆಯಾಗಿದ್ದಾನೆ.
'ನನ್ನ ಹಿರಿಯ ಮಗ ಸಿಕ್ಕಮೇಲೆ ನನಗೆ ಜೀವ ಮರಳಿ ಬಂದಂತಾಗಿದೆ ಎಂದು ಭಾವುಕರಾಗಿ ನುಡಿದ ತಮಾಂಗ್, ಅವನು ತುಂಟ, ಕಾಲು ಮುರಿದುಕೊಳ್ಳುವುದು ಇದೇ ಮೊದಲೇನಲ್ಲ' ಎಂದು ಪ್ರೀತಿಯಿಂದ ನೆನೆದಿದ್ದಾರೆ.
ಯುಎನ್‌ಐಸಿಇಎಫ್ ವರದಿಯ ಪ್ರಕಾರ, ಈ ಪ್ರವಾಹದಿಂದಾಗಿ ಕಠ್ಮಂಡು ಉತ್ತರದ ಭಾಗಗಳಲ್ಲಿ ಕನಿಷ್ಠ 17, 000ಕ್ಕೂ ಹೆಚ್ಚು ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ.

