ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾವು ಸುಮಾರು 60 ಕಿ.ಮೀ.ವರೆಗೆ ಅತಿಕ್ರಮಣ ಮಾಡಿದೆ ಎಂಬ ವರದಿಗಳನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ತಿರಸ್ಕರಿಸಿದ್ದಾರೆ. ಅರುಣಾಚಲಪ್ರದೇಶದ ಗಡಿಯಲ್ಲಿ ಸಮಸ್ಯೆಯಿದೆಯೆಂಬುದನ್ನು ಒಪ್ಪಿಕೊಂಡ ಅವರು, ಗಡಿರೇಖೆಯನ್ನು ಸ್ಪಷ್ಟವಾಗಿ ಗುರುತಿಸದೆ ಇರುವುದೇ ಇದಕ್ಕೆ ಕಾರಣವೆಂದು ಹೇಳಿದ್ದಾರೆ.
ಅರುಣಾಚಲಪ್ರದೇಶದ ಗಡಿಮುಂಚೂಣಿ ಪ್ರದೇಶಗಳಲ್ಲಿ ವಾಸವಾಗಿರುವ ಗ್ರಾಮಸ್ಥರು, ಗಡಿ ಸುರಕ್ಷತೆ ಬಗ್ಗೆ ವ್ಯಕ್ತಪಡಿಸುತ್ತಿರುವ ಕಳವಳಗಳು ಸಮಂಜಸವಾಗಿವೆ. ಆದರೆ ಭಾರತದ ಭೂಪ್ರದೇಶದೊಳಗೆ ಚೀನಿಪಡೆಗಳು ಪ್ರವೇಶಿಸುತ್ತಿವೆ ಎಂಬ ತಪ್ಪು ಮಾಹಿತಿಯನ್ನು ಹರಡುವುದರ ವಿರುದ್ಧ ಅವರು ಎಚ್ಚರಿಕೆ ನೀಡಿದ್ದಾರೆ.
ಐಎಎನ್‌ಎಸ್ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ಅರುಣಾಚಲ ಪ್ರದೇಶದ ಗಡಿಯನ್ನು ಸ್ಪಷ್ಟವಾಗಿ ಗುರುತಿಸದಿರುವುದರಿಂದ ಆ ರಾಜ್ಯದ ಕೆಲವು ನಿರ್ದಿಷ್ಟ ಪ್ರದೇಶಗಳ ಮೇಲೆ ಚೀನಾವು ಹಕ್ಕೊತ್ತಾಯ ಮಾಡುತ್ತಿದೆಯೆಂದರು. ಆದರೆ ಈ ಸನ್ನಿವೇಶವನ್ನು ಚೀನಾವು ಭಾರತದ ಗ್ರಾಮವೊಂದನ್ನು ವಶಪಡಿಸಿಕೊಂಡಿದೆ ಎಂಬಂತೆ ವ್ಯಾಖ್ಯಾನಿಸಬಾರದೆಂದು ರಿಜಿಜು ತಿಳಿಸಿದರು.
''ಅರುಣಾಚಲಪ್ರದೇಶದ ಕೆಲವು ನಿರ್ದಿಷ್ಟ ಭೂಭಾಗವನ್ನು ಸ್ಪಷ್ಟವಾಗಿ ಗುರುತಿಸದೆ ಇರುವುದರಿಂದ ಅದರ ಮೇಲೆ ಚೀನಾವು ಕಣ್ಣಿಟ್ಟಿದೆ. ನಮ್ಮ ಭೂಪ್ರದೇಶವು ಚೀನಾದ ಗಡಿಯೊಳಗೂ ವಿಸ್ತರಿಸಿದೆ ಎಂದು ನಮ್ಮ ಜನರು ಭಾವಿಸುತ್ತಾರೆ. ಅದೇ ರೀತಿ ಟಿಬೆಟಿಯನ್ನರು ಸೇರಿದಂತೆ ಚೀನಾದ ಜನತೆ ಕೂಡಾ ಅವರ ಭೂಭಾಗವು ಇಲ್ಲಿ ತನಕವೂ ವಿಸ್ತರಿಸಿದೆಯೆಂದು ಭಾವಿಸುತ್ತಾರೆ. ಹೀಗಾಗಿ ಇಲ್ಲಿ ಗೊಂದಲವಿದೆ'' ಎಂದು ರಿಜಿಜು ತಿಳಿಸಿದ್ದಾರೆ.
ಆದರೆ ಚೀನಿಯರು ಅರುಣಾಚಲದಲ್ಲಿ 60 ಕಿ.ಮೀ. ನಷ್ಟು ಒಳಗೆ ನುಸುಳಿದ್ದಾರೆಂಬ ಸುಳ್ಳು ಸುದ್ದಿಗಳನ್ನು ಹರಡುವುದಕ್ಕಾಗಿ ಇದಕ್ಕೆ ಸಂಬಂಧವೇ ಇಲ್ಲದ ಬಾಂಗ್ಲಾದೇಶದ ಛಾಯಾಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಪ್ಪು ಮಾಹಿತಿಯನ್ನು ಹರಡುವುದು, ಸೇನಾ ಯೋಧರು ಹಾಗೂ ಅಲ್ಲಿ ನಿಯೋಜಿತರಾದ ಭದ್ರತಾಪಡೆಗಳ ನೈತಿಕಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದರು.
ಅರುಣಾಚಲದ ಗಡಿಯುದ್ದಕ್ಕೂ ಭಾರತವು ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಿದೆ. ಸೇನೆ ಹಾಗೂ ಇಂಡೋ-ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಈ ಪ್ರದೇಶದಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಿದ್ದಾರೆ ಎಂದರು.

