HEALTH TIPS

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸ್‌ ದೌರ್ಜನ್ಯ: ಪರಿಶೀಲನೆಗೆ ಸಮಿತಿ ರಚನೆ

ನವದೆಹಲಿ (PTI): ನವದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನಕಾರರ ಮೇಲಿನ ಪೊಲೀಸರ ದೌರ್ಜನ್ಯ ಮತ್ತು ಪೊಲೀಸ್‌ ಸಿಬ್ಬಂದಿ ವಿರುದ್ಧದ ಹಿಂಸಾಚಾರದ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಡಿಜಿಪಿ ಮತ್ತು ಸಿಬಿಐ ಮಾಜಿ ನಿರ್ದೇಶಕರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ತಿಳಿಸಿದೆ.


ಸಮಿತಿಯಲ್ಲಿ ಇರಬೇಕಾದ ಇತರ ಸದಸ್ಯರ ಕುರಿತು ವಿವಿಧ ವರ್ಗಗಳ ಜನರಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ ಸಮಿತಿ ರಚನೆಗೆ ಬುಧವಾರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠ ತಿಳಿಸಿದೆ.

'ಉನ್ನತಾಧಿಕಾರ ಸಮಿತಿಗೆ ಸತ್ಯಶೋಧನೆಯ ಜವಾಬ್ದಾರಿ ವಹಿಸಲಾಗುವುದು. ಸಂತ್ರಸ್ತ ವ್ಯಕ್ತಿಯು ಸಮಿತಿಯನ್ನು ಸಂಪರ್ಕಿಸಿದ ಕೂಡಲೇ ಅವರ ಅಳಲನ್ನು ಸಮಿತಿ ಆಲಿಸಲಿದೆ ಎಂಬ ಭರವಸೆ ನಮಗಿದೆ. ಸಮಿತಿಯು ಕಾಲಕಾಲಕ್ಕೆ ನೀಡುವ ಶಿಫಾರಸುಗಳ ಆಧಾರದ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದೆ.

'ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಸಾಮಾಜಿಕ ಮಾಧ್ಯಮಗಳ ಮೂಲಕ ಸಂತ್ರಸ್ತರ ತೇಜೋವಧೆಯ ಪ್ರಯತ್ನ ಗಳನ್ನೂ ಸಮಿತಿಯು ಪರಿಶೀಲನೆಗೆ ಒಳಪಡಿಸಲಿದೆ' ಎಂದು ಹೇಳಿದೆ.

'ಯಾವುದೇ ವ್ಯಕ್ತಿ ದೌರ್ಜನ್ಯ ಎಸಗಿದ್ದರೂ ಅದಕ್ಕೆ ಕ್ಷಮೆಯಾಗಲಿ ಸಮರ್ಥನೆಯಾಗಲಿ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಅದಕ್ಕಾಗಿಯೇ ಉನ್ನತಾಧಿಕಾರ ಸಮಿತಿ ರಚಿಸುತ್ತಿದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

'ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂಸತ್‌ ಚಲೋ ಸಂದರ್ಭದಲ್ಲಿ ನಡೆದ ಹಿಂಸಾಚಾರದ ವಿಡಿಯೊ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆಗಾಗಿ ಉನ್ನತಾಧಿಕಾರ ಸಮಿತಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಲಾಗುವುದು' ಎಂದು ಪೀಠವು ತಿಳಿಸಿದೆ.

'ಇಲ್ಲಿ ವಿದ್ಯಾರ್ಥಿಗಳ ಜೀವನವನ್ನು ಪಣಕ್ಕಿಡಲಾಗಿದೆ. ನಾವು ಇದನ್ನು ಪರಿಗಣಿಸಬೇಕಾಗಿದೆ. ಅವರಿಗೆ ಉತ್ತಮ ಭವಿಷ್ಯವಿದೆ. ಸಂವಿಧಾನದ 19ನೇ ವಿಧಿಯಡಿ ಪ್ರತಿಭಟಿಸುವ ಹಕ್ಕು ಸಹ ಅವರಿಗಿದೆ' ಎಂದು ಅಭಿಪ್ರಾಯಪಟ್ಟಿದೆ.

ಪ್ರತಿಭಟನೆನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಹಾಗೂ ರದ್ದುಗೊಳಿಸಬೇಕಿರುವ ಎಫ್‌ಐಆರ್‌ಗಳ ವಿವರ ಒದಗಿಸುವಂತೆ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಪೀಠ ಸೂಚಿಸಿದೆ.

'ಜುಲೈ 20ರಂದು ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರದ ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 2,800ಕ್ಕೂ ಹೆಚ್ಚಿನ ಸಮಾಜಘಾತುಕ ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ' ಎಂದು ಮೆಹ್ತಾ ತಿಳಿಸಿದ್ದಾರೆ.

ಗೋಪ್ಯತೆ ಉಲ್ಲಂಘನೆ: ಆರೋಪ

'ಕಣ್ಗಾವಲು, ಮುಖ ಗುರುತಿಸುವಿಕೆ ತಂತ್ರಜ್ಞಾನಗಳು ಮತ್ತು ಇತರ ಡಿಜಿಟಲ್‌ ಟ್ರ್ಯಾಕಿಂಗ್‌ ವಿಧಾನಗಳನ್ನು ಬಳಸಲು ಹಾಗೂ ಹೀಗೆ ಸಂಗ್ರಹಿಸಿದ ದತ್ತಾಂಶಗಳನ್ನು ಖಾಸಗಿ ಸಂಸ್ಥೆಯ ಬಳಿ ಸಂಗ್ರಹಿಸಿಡುವ ಅಧಿಕಾರವನ್ನು ‍ಪೊಲೀಸರು ಹೊಂದಿಲ್ಲ. ಏಕೆಂದರೆ ಇದು ಸಂತ್ರಸ್ತರ ಗೋಪ್ಯತೆಯ ಉಲ್ಲಂಘನೆಯಾಗಿದೆ' ಎಂದು ಸಂತ್ರಸ್ತರಲ್ಲಿ ಹಲವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಮೇನಕಾ ಗುರುಸ್ವಾಮಿ, ವೃಂದಾ ಗ್ರೋವರ್‌ ಮತ್ತು ಎನ್‌. ಹರಿಹರನ್‌ ವಾದಿಸಿದರು.

'ಮುಖ ಗುರುತಿಸುವಿಕೆ ತಂತ್ರಜ್ಞಾನ, ಕಣ್ಗಾವಲು, ಗೋಪ್ಯತೆ ಮತ್ತು ಸಂವಿಧಾನದ 21ನೇ ವಿಧಿಗೆ ಸಂಬಂಧಿಸಿದ ಸಾಂವಿಧಾನಿಕ ಪ್ರಶ್ನೆಗಳನ್ನು ಅಂತಿಮವಾಗಿ ನ್ಯಾಯಾಲಯ ನಿರ್ಧರಿಸುತ್ತದೆಯೇ ಹೊರತು ಸಮಿತಿಯಲ್ಲ' ಎಂದು ಪೀಠವು ಸ್ಪಷ್ಟಪಡಿಸಿದೆ.

'ಸಮಿತಿಯು ವಾಸ್ತವಿಕ ಪ್ರಶ್ನೆಗಳನ್ನು ಮಾತ್ರ ಪರಿಶೀಲಿಸುತ್ತದೆ. ಇದರಲ್ಲಿ ಅತಿಯಾದ ಬಲಪ್ರಯೋಗವಾಗಿದೆಯೇ ಎಂಬುದೂ ಸೇರಿದೆ. ಸಮಿತಿಯಿಂದ ವರದಿ ಬಂದ ಬಳಿಕ, ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾನೂನು ಮತ್ತು ಸಾಂವಿಧಾನಿಕ ಪ್ರಶ್ನೆಗಳನ್ನು ನ್ಯಾಯಾಲಯವು ಪರಿಶೀಲಿಸುತ್ತದೆ' ಎಂದು ಹೇಳಿದೆ.

'ಪೊಲೀಸರು ಬಳಸುವ ಮುಖ ಗುರುತಿಸುವಿಕೆ ತಂತ್ರಜ್ಞಾನವು ಎಲ್ಲ ವ್ಯಕ್ತಿಗಳ ಮುಖಗಳನ್ನು ಸ್ಕ್ಯಾನ್‌ ಮಾಡುವುದಿಲ್ಲ. ಈ ಹಿಂದೆ ಯಾವುದಾದರೂ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ ಮತ್ತು ಅವರ ಮಾಹಿತಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಳಿ ಲಭ್ಯವಿರುವ ವ್ಯಕ್ತಿಗಳನ್ನು ಮಾತ್ರ ಅದು ಗುರುತಿಸಿ ತೋರಿಸುತ್ತದೆ' ಎಂದು ತುಷಾರ್‌ ಮೆಹ್ತಾ ಸ್ಪಷ್ಟಪಡಿಸಿದರು.

'ದೌರ್ಜನ್ಯ ಎಸಗುವುದು ಸರಿಯಲ್ಲ'

ವಿದ್ಯಾರ್ಥಿ ಪ್ರತಿಭಟನಕಾರರನ್ನು ಬಿಡುಗಡೆ ಮಾಡುವ ಕುರಿತಾದ ತನ್ನ ಆದೇಶದಲ್ಲಿನ 'ಕ್ರಿಮಿನಲ್‌ ಹಿನ್ನೆಲೆ' ಎಂಬ ಪದವು ಕೇವಲ ಗಂಭೀರ ಅಪರಾಧಗಳಲ್ಲಿ ಭಾಗಿಯಾದವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 3ರಂದು ಸ್ಪಷ್ಟಪಡಿಸಿತ್ತು. ಉಳಿದ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ಕಾನೂನು ಪ್ರಕಾರ ಹಿಂಪಡೆಯಲು ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ ಎಂದು ಹೇಳಿತ್ತು.

'ಜನರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುವುದು ಅಥವಾ ದೌರ್ಜನ್ಯ ಎಸಗುವುದು ಸರಿಯಲ್ಲ. ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಪ್ರಜೆಗಳಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಸಂಪೂರ್ಣ ಹಕ್ಕಿದೆ' ಎಂದು ಪೀಠವು ಹೇಳಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries