HEALTH TIPS

ಕಾಂಗ್ರೆಸ್-ಎಸ್‌ಪಿ ವಿಲೀನ: ಉತ್ತರ ಪ್ರದೇಶದ ರಾಜಕೀಯ ಲೆಕ್ಕಾಚಾರವೇನು?

ಲಖನೌ: ರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜಕಾರಣದಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳ ವಿಲೀನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


ಎರಡು ಪಕ್ಷಗಳ ನಡುವಿನ ಮೈತ್ರಿ ಮಾತುಕತೆಗಳು ಸಂಕೀರ್ಣಗೊಂಡಾಗ, ಸೀಟು ಹಂಚಿಕೆ ವಿಕೋಪಕ್ಕೆ ತಿರುಗಿದಾಗ ಅಥವಾ ಸ್ಥಳೀಯ ನಾಯಕರು ಪಕ್ಷ ತೊರೆಯುವಾಗ 'ಎರಡು ಪಕ್ಷಗಳ ವಿಲೀನ' ಎಂಬುದು ಅತ್ಯಂತ ಸರಳ ಪರಿಹಾರದಂತೆ ಕಾಣುತ್ತದೆ.

ಪ್ರತಿ ಚುನಾವಣೆಯಲ್ಲೂ ಮೈತ್ರಿ ಪಕ್ಷಗಳು ಚೌಕಾಶಿ ಮಾಡುವ ಬದಲು ಒಂದಾದರೆ ಹೇಗೆ? ಎಂಬ ಆಲೋಚನೆ ಮೇಲ್ನೋಟಕ್ಕೆ ರೋಚಕವಾಗಿ ಕಾಣಿಸುತ್ತದೆ ಆದರೂ ಒಂದು ಪಕ್ಷವಂತೂ ಇತಿಹಾಸ ಸೇರುತ್ತದೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಅಖಿಲೇಶ್ ಯಾದವ್ ಅವರು ಜಾತಿ, ನ್ಯಾಯ, ಪ್ರಾತಿನಿಧ್ಯ ಮತ್ತು ಒಳಗೊಳ್ಳುವಿಕೆಯ ರಾಜಕೀಯ ತತ್ವಗಳಲ್ಲಿ ಒಂದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಎಸ್‌ಪಿ ವಿಲೀನಗೊಳ್ಳಬೇಕು ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಆದರೆ, ಈ ಪ್ರಸ್ತಾಪ ತಪ್ಪು ಪ್ರಶ್ನೆಗೆ ಉತ್ತರ ಹುಡುಕುವಂತಿದೆ.

ರಾಜಕೀಯದಲ್ಲಿ ಎರಡೂ ಪ್ಲಸ್ ಎರಡು ಎಂದಿಗೂ ನಾಲ್ಕಾಗುವುದಿಲ್ಲ. ಇಲ್ಲಿ ಎರಡೂ ಪ್ಲಸ್ ಎರಡು ಕೆಲವೊಮ್ಮೆ ಮೂರು, ಐದು ಅಥವಾ ಶೂನ್ಯವೂ ಆಗಬಹುದು! ಮತಗಳ ಹಿಂದೆ ಜಾತಿ, ವರ್ಗ, ಸ್ಥಳೀಯರ ನಿಷ್ಠೆ ಮತ್ತು ಪಕ್ಷದ ಕಾರ್ಯಕರ್ತರ ಆಕಾಂಕ್ಷೆಗಳಿರುತ್ತವೆ. ದೆಹಲಿ ಮಟ್ಟದಲ್ಲಿ 'ವಿಲೀನ' ಎಂಬುದು ಒಗ್ಗೂಡುವಿಕೆಯಂತೆ ಕಂಡರೂ, ಉತ್ತರ ಪ್ರದೇಶದ ನೆಲದಲ್ಲಿ ಅದು ತೀವ್ರ ಗಂಭೀರ ವಿಷಯ.

ಕಾಂಗ್ರೆಸ್ ಮತ್ತು ಎಸ್‌ಪಿ ಒಂದೇ ಸಾಮಾಜಿಕ ಸಿದ್ಧಾಂತದ ಅಡಿಯಲ್ಲಿ ಸಾಗುತ್ತಿವೆ ಎಂಬ ವಾದದಲ್ಲಿ ಸತ್ಯವಿದ್ದರೂ, ಅದರಿಂದ ವಿಲೀನದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ರಾಜಕೀಯ ಸಿದ್ಧಾಂತಗಳ ಸಮ್ಮಿಲನ ಎಂದರೆ ಪಕ್ಷಗಳ ಏಕೀಕರಣವಲ್ಲ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಐತಿಹಾಸಿಕವಾಗಿ ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಮರನ್ನು ಒಳಗೊಂಡ ಬೃಹತ್ ಒಕ್ಕೂಟವಾಗಿತ್ತು. ಮಂಡಲ್ ವರದಿ ಮತ್ತು ರಾಮ ಮಂದಿರ ರಾಜಕೀಯದ ನಂತರ ಈ ಸಾಮಾಜಿಕ ಸಮೀಕರಣ ಶಿಥಿಲಗೊಂಡಿತು. ಮತ್ತೊಂದೆಡೆ, ಸಮಾಜವಾದಿ ಪಕ್ಷ ರಾಮ್ ಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತ, ಹಿಂದುಳಿದ ವರ್ಗಗಳ ಜಾಗೃತಿ ಮತ್ತು ಪ್ರಾದೇಶಿಕ ಅಸ್ತಿತ್ವದಿಂದ ರೂಪುಗೊಂಡ ಪಕ್ಷ. ಯಾದವರು, ಇತರ ಹಿಂದುಳಿದ ವರ್ಗಗಳು (OBC) ಮತ್ತು ಮುಸ್ಲಿಮರು ಇದರ ಮೂಲ ಬಲ.

ಎರಡೂ ಪಕ್ಷಗಳು ಇಂದು ದಲಿತ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಯತ್ನಿಸುತ್ತಿವೆ ಎಂದ ಮಾತ್ರಕ್ಕೆ ವಿಲೀನವಾಗಬೇಕು ಎಂದಲ್ಲ. ಮುಸ್ಲಿಂ ಮತಬ್ಯಾಂಕ್ ಎಂಬುದು ಒಂದೇ ಕಡೆ ನಿಂತಿರುವ ಮತಗಳಲ್ಲ; ಅಲ್ಲಿಯೂ ಪ್ರಾದೇಶಿಕತೆ, ಸ್ಥಳೀಯ ನಾಯಕರ ಪ್ರಭಾವ ಕೆಲಸ ಮಾಡುತ್ತದೆ.

ಜೊತೆಗೆ, ಪ್ರತಿ ಜಿಲ್ಲೆಯಲ್ಲೂ ದಶಕಗಳಿಂದ ಟಿಕೆಟ್‌ಗಾಗಿ, ಪಕ್ಷದ ಹುದ್ದೆಗಾಗಿ ದುಡಿದ ನಾಯಕರಿದ್ದಾರೆ. ಎರಡು ಪಕ್ಷಗಳು ಒಂದಾದರೆ ರಾಜಕೀಯ ಶಕ್ತಿ ದುಪ್ಪಟ್ಟಾಗುವುದಿಲ್ಲ, ಬದಲಿಗೆ ಒಂದೇ ಹುದ್ದೆ ಅಥವಾ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ಸೃಷ್ಟಿಯಾಗಿ ಬಂಡಾಯ, ಪಕ್ಷಾಂತರ ಹೆಚ್ಚಾಗುವ ಅಪಾಯವಿರುತ್ತದೆ.

ಉತ್ತರ ಪ್ರದೇಶದ ಇತಿಹಾಸ...

ಕಾಂಗ್ರೆಸ್‌-ಎಸ್‌ಪಿ ಪಕ್ಷಗಳ ವಿಲೀನದ ಪ್ರಯೋಗಕ್ಕೆ ಸಂಶೋಧನೆಗಳ ಅಗತ್ಯವಿಲ್ಲ ಇದಕ್ಕೆ ಉತ್ತರ ಪ್ರದೇಶದ ಇತಿಹಾಸವೇ ಸಾಕ್ಷಿ.

2017ರ ವಿಧಾನಸಭೆ ಚುನಾವಣೆ: ಈ ವೇಳೆ ರಾಹುಲ್-ಅಖಿಲೇಶ್ ಜೋಡಿ ಕಣಕ್ಕಿಳಿದರೂ, ಫಲಿತಾಂಶ ಭಿನ್ನವಾಗಿತ್ತು. ಬಿಜೆಪಿ 312 ಸ್ಥಾನ ಗೆದ್ದರೆ, ಎಸ್‌ಪಿ 47 ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ಕುಸಿಯಿತು. ಉಭಯ ಪಕ್ಷಗಳ ನಾಯಕರ ನಡುವಿನ ಬಾಂಧವ್ಯ ಕೆಳಮಟ್ಟದ ಕಾರ್ಯಕರ್ತರಲ್ಲಿ ಮತ ವರ್ಗಾವಣೆಯಾಗುವುದನ್ನು ಈ ಫಲಿತಾಂಶ ಖಾತರಿಪಡಿಸುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ.

2019ರ ಮಹಾಘಟಬಂಧನ್: ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಕಾಗದದ ಮೇಲೆ ಪ್ರಬಲವಾಗಿ ಕಂಡರೂ ಮತಗಳು ವರ್ಗಾವಣೆಯಾಗದೆ ಎಸ್‌ಪಿ ಕೇವಲ 15 ಸ್ಥಾನಗಳಿಗಷ್ಟೇ ಸೀಮಿತವಾಯಿತು.

2024ರ ಲೋಕಸಭಾ ಚುನಾವಣೆ: ಈ ಚುನಾವಣೆಯ ಫಲಿತಾಂಶ ಸಂಪೂರ್ಣ ಭಿನ್ನವಾಗಿತ್ತು. ಕಾಂಗ್ರೆಸ್ ಮತ್ತು ಎಸ್‌ಪಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಮೈತ್ರಿ ಮಾಡಿಕೊಂಡವು. ಎಸ್‌ಪಿ 37, ಕಾಂಗ್ರೆಸ್ 6 ಸ್ಥಾನ ಗೆದ್ದು, 'ಇಂಡಿಯಾ' ಒಕ್ಕೂಟ ಒಟ್ಟು 43 ಸ್ಥಾನಗಳನ್ನು ಪಡೆಯಿತು. ತಮ್ಮದೇ ಆದ ಚಿಹ್ನೆ, ನಾಯಕತ್ವ ಮತ್ತು ಕಾರ್ಯಕರ್ತರನ್ನು ಉಳಿಸಿಕೊಂಡೇ ಸ್ಪರ್ಧಿಸಿದ್ದು ಈ ಯಶಸ್ಸಿಗೆ ಕಾರಣ.

ಜನತಾ ಪಕ್ಷದ ಐತಿಹಾಸಿಕ ಎಚ್ಚರಿಕೆ...

ಪ್ರಬಲ ನಾಯಕನನ್ನು ಸೋಲಿಸಲು ಭಾರತೀಯ ರಾಜಕೀಯದಲ್ಲಿ ನಡೆದ ಬೃಹತ್ ವಿಲೀನ ಎಂದರೆ 1977ರ 'ಜನತಾ ಪಕ್ಷ'. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ (ಒ), ಭಾರತೀಯ ಲೋಕದಳ, ಜನಸಂಘ ಮತ್ತು ಸಮಾಜವಾದಿ ಬಣಗಳು ಒಂದಾದವು. ಚುನಾವಣೆ ಗೆದ್ದು ಪ್ರಥಮ ರಂಗದ ಸರ್ಕಾರ ರಚನೆಯಾಯಿತಾದರೂ, ಸಿದ್ಧಾಂತಗಳ ಸಂಘರ್ಷ ಹಾಗೂ ನಾಯಕರ ಅಹಂನಿಂದಾಗಿ 1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಪತನಗೊಂಡಿತು.

ಪ್ರತಿಪಕ್ಷಗಳಿಗೆ 'ಮೋದಿಯವರನ್ನು ಸೋಲಿಸುವುದು' ಒಂದು ಉದ್ದೇಶವಾಗಬಹುದೇ ಹೊರತು, ಅದು ಪಕ್ಷದ ಸಿದ್ಧಾಂತವಾಗಲು ಸಾಧ್ಯವಿಲ್ಲ. ವಿಲೀನವಾದರೆ 'ಉತ್ತರ ಪ್ರದೇಶದ ಸಂಘಟನೆ ಯಾರ ಕೈಯಲ್ಲಿರಬೇಕು?', ಟಿಕೆಟ್ ಹಂಚಿಕೆ ಹೇಗೆ?' ಎಂಬ ಪ್ರಶ್ನೆಗಳು ಎದ್ದು ಪಕ್ಷದ ಅಸ್ತಿತ್ವಕ್ಕೇ ಕಂಟಕವಾಗಬಹುದು.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನ ವಿಘಟನೆಯಿಂದಷ್ಟೇ ಹುಟ್ಟಿಕೊಂಡಿಲ್ಲ, ಅವು ಪ್ರಾದೇಶಿಕ ಆಶೋತ್ತರಗಳು ಹಾಗೂ ಸಂಸದೀಯ ಒಕ್ಕೂಟ ವ್ಯವಸ್ಥೆಯ ಸಂಕೇತಗಳು. ಭಾರತದ ರಾಜಕೀಯವು ರಾಷ್ಟ್ರೀಕರಣಗೊಳ್ಳುತ್ತಿದ್ದರೂ, ಚುನಾವಣೆಗಳು ನಡೆಯುವುದು ಸ್ಥಳೀಯ ನಾಯಕತ್ವ, ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಂಸ್ಕೃತಿಯ ಮೇಲೆಯೇ.

ಅಖಿಲೇಶ್ ಯಾದವ್ ಅವರ ಶಕ್ತಿ ಇರುವುದೇ ಅವರು 'ಕಾಂಗ್ರೆಸ್ ನಾಯಕರಲ್ಲ' ಎಂಬ ಕಾರಣಕ್ಕೆ. ಅವರದೇ ಆದ ಕಾರ್ಯಕರ್ತರ ಪಡೆ ಹಾಗೂ ಸಿದ್ಧಾಂತವಿದೆ. ಹಾಗೆಯೇ, ಎಸ್‌ಪಿಯನ್ನು ಒಪ್ಪದ, ಬಿಜೆಪಿಗೆ ಪರ್ಯಾಯ ಬಯಸುವ ಮತದಾರರನ್ನು ಕಾಂಗ್ರೆಸ್ ಆಕರ್ಷಿಸಬಲ್ಲದು.

ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಪರಸ್ಪರ ತಮ್ಮ ಸ್ವಂತ ಅಸ್ತಿತ್ವವನ್ನು ಕಾಯ್ದುಕೊಂಡು ಒಟ್ಟಿಗೆ ಕೆಲಸ ಮಾಡುವುದರಲ್ಲಿ ಜಾಣತನವಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries