ನವದೆಹಲಿ (PTI): ದೆಹಲಿ ಜಲಬೋರ್ಡ್ ವತಿಯಿಂದ ನಿರ್ಮಿಸಲಾದ ಒಳಚರಂಡಿ ಸಂಸ್ಕರಣಾ ಘಟಕ ಯೋಜನೆಗಳ (ಎಸ್‌ಟಿಪಿ) ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವೆಸಗಿದ ಆರೋಪದ ಮೇಲೆ ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್, ದೆಹಲಿ ಜಲಬೋರ್ಡ್‌ನ ಮಾಜಿ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಉದಿತ್ ಪ್ರಕಾಶ್ ರಾಯ್ ಸೇರಿ ಆರು ಮಂದಿಯನ್ನು ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ)ಯ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಉಳಿದಂತೆ ಜಲಬೋರ್ಡ್‌ನ ಮಾಜಿ ಗುತ್ತಿಗೆ ಸಲಹೆಗಾರ ಅಂಕಿತ್ ಶ್ರೀವಾತ್ಸವ, ಖಾಸಗಿ ವ್ಯಕ್ತಿಗಳಾದ ನಾಗೇಂದ್ರ ಯಾದವ್, ರಾಜ ಕುಮಾರ್ ಕುರ್ರಾ ಹಾಗೂ ಪಂಕಜ್ ವರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್‌ಟಿಪಿಗಳ ಉನ್ನತೀಕರಣಗೊಳಿಸುವ ಟೆಂಡರ್ ಪ್ರಕ್ರಿಯೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರವೆಸಗಿರುವ ಕುರಿತು ವಿಚಕ್ಷಣಾ ದಳದ ಅಧಿಕಾರಿಗಳು 2024ರ ಮೇ 11ರಂದು ಪ್ರಕರಣ ದಾಖಲಿಸಿದ್ದರು.

