ಕೋಲ್ಕತ್ತ: ದ್ವೇಷಪೂರಿತ ಭಾಷಣ ಪ್ರಕರಣ ಸಂಬಂಧ ನ್ಯಾಯಾಲಯದ ಎದುರು ಖುದ್ದು ಹಾಜರಾಗದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಹೊರಡಿಸಿದೆ.
ಕೃಷ್ಣನಗರ ನ್ಯಾಯಾಲಯದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಬಂಧನ ವಾರಂಟ್ ತಕ್ಷಣವೇ ಜಾರಿಯಾಗುವಂತೆ ಆದೇಶಿಸಿದ್ದಾರೆ.
ಮಹಿಳೆಯರಿಗೆ ಅವಮಾನ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯವು ಮೊಯಿತ್ರಾಗೆ ಹಲವು ಬಾರಿ ಸಮನ್ಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ.
ಮಂಗಳವಾರವೂ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಮೊಯಿತ್ರಾಗೆ ಸೂಚಿಸಲಾಗಿತ್ತು. ಆದರೆ, ಅವರು ಗೈರಾಗಿದ್ದರು. ಈ ವಿಚಾರ ಉಲ್ಲೇಖಿಸಿದ ನ್ಯಾಯಾಧೀಶರು, 'ಆರೋಪಿಯು ಕೋರ್ಟ್ ಆದೇಶವನ್ನು ಹಲವು ಬಾರಿ ಉಲ್ಲಂಘಿಸಿರುವುದು ನಿರ್ಲಕ್ಷ್ಯದ ಧೋರಣೆಯನ್ನು ತೋರಿಸುತ್ತದೆ. ಹೀಗಾಗಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸುವುದನ್ನು ಬಿಟ್ಟು ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ' ಎಂದು ಖಾರವಾಗಿ ಹೇಳಿದ್ದಾರೆ.
'ಅವರು (ಮೊಯಿತ್ರಾ) ಯಾವುದೇ ಕಾರಣಕ್ಕೂ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ' ಎಂದು ವಕೀಲರು ತಿಳಿಸಿರುವುದನ್ನು ಉಲ್ಲೇಖಿಸಿದ ನ್ಯಾಯಾಧೀಶರು, 'ಆರೋಪಿಗೆ ಕಾನೂನಿನ ಮೇಲೆ ಗೌರವವಿಲ್ಲ' ಎಂದು ತಿವಿದಿದ್ದಾರೆ.
'ನಮ್ಮ ಕಕ್ಷಿದಾರರು ಕೋರ್ಟ್ ಆವರಣಕ್ಕೆ ಬಂದರೆ ಅವರ ಮೇಲೆ ಹಲ್ಲೆ ನಡೆಯುವ ಆತಂಕವಿದೆ' ಎಂದು ಮೊಯಿತ್ರಾ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

