ವಿಶಾಖಪಟ್ಟಣಂ: 'ಸಮಾಜ ಸೇವೆಗೆ ಶ್ರೀಮಂತಿಕೆ ಬೇಕಾಗಿಲ್ಲ, ಒಳ್ಳೆಯ ಹೃದಯವಿದ್ದರೆ ಸಾಕು' ಎಂಬಂತೆ, ವಿಶಾಖಪಟ್ಟಣಂನ ಆಟೋ ಚಾಲಕರೊಬ್ಬರು, ಕಳೆದ 26 ವರ್ಷಗಳಿಂದ ಸುಮಾರು 9,423 ಗರ್ಭಿಣಿಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
48 ವರ್ಷದ ಆಟೋ ಚಾಲಕ ಯು.ಸುಂದರ್ ರಾವ್ ಅವರು 1990ರಲ್ಲಿ ಆಟೋ ಒಂದನ್ನು ಖರೀದಿಸುತ್ತಾರೆ. ಈ ಹಿಂದೆ ಅವರ ತಂದೆ ಕೂಡ ಸೈಕಲ್ ರಿಕ್ಷಾ ತುಳಿಯುತ್ತಿದ್ದರು. ಅವರು ಕೂಡ ನೂರಾರು ಗರ್ಭಿಣಿಯರನ್ನು ಹೆರಿಗೆಯ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಉಚಿತವಾಗಿ ಆಸ್ಪತ್ರೆಗೆ ತಲುಪಿಸುತ್ತಿದ್ದರು.
ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲಿಯೇ ನಡೆಯಲು ನಿರ್ಧರಿಸಿದ್ದ ಸುಂದರ್ ರಾವ್, 2000ನೇ ಇಸವಿಯಿಂದ ಗರ್ಭಿಣಿಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದರು. ಈ ಸೇವೆ ಆರಂಭವಾಗಿ 36 ವರ್ಷ ಕಳೆದಿವೆ.
ಈ ಕುರಿತು ಮಾತನಾಡಿರುವ ಅವರು, 'ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ತಿಳಿಯುತ್ತದೆ. ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಂದಾಗ ಆಶಾ ಕಾರ್ಯಕರ್ತೆಯರು ನನಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಆಗ ಅವರಿರುವ ಸ್ಥಳಕ್ಕೆ ಹೋಗಿ, ಉಚಿತವಾಗಿ ಅವರನ್ನು ಆಸ್ಪತ್ರೆಗೆ ಬಿಡುತ್ತೇನೆ' ಎಂದು ಸುಂದರ್ ರಾವ್ ಹೇಳುತ್ತಾರೆ.
ಸುಂದರ್ ರಾವ್ ಅವರ ಸಮಾಜ ಸೇವೆಗೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ಜತೆಗೆ ಸನ್ಮಾನಿಸಿ ಗೌರವಿಸಿದೆ. ಜಿಲ್ಲಾಧಿಕಾರಿ ಅಭಿಷಿಕ್ತ ಕಿಶೋರ್ ಹಾಗೂ ಆಂಧ್ರಪ್ರದೇಶದ ಕಂದಾಯ ಸಚಿವ ಸತ್ಯ ಪ್ರಸಾದ್ ಅವರು ಆಟೋ ಚಾಲಕನ ಮಾನವೀಯತೆಯನ್ನು ಶ್ಲಾಘಿಸಿದ್ದಾರೆ.
ಸುಂದರ್ ರಾವ್ ಅವರು ಗರ್ಭಿಣಿಯರಿಗೆ ಮಾತ್ರವಲ್ಲದೆ, ಕೆಲ ಹಬ್ಬಗಳ ಸಂದರ್ಭದಲ್ಲಿ ವಯೋವೃದ್ಧರಿಗೂ ಉಚಿತ ಸೇವೆ ನೀಡುತ್ತಾರೆ.

