ಪಾಟ್ನಾ: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಮುರಿದ ಕಾಲಿಗೆ ಪ್ಲಾಸ್ಟರ್ ಹಾಕುವ ಬದಲು ಔಷಧಿ ಪ್ಯಾಕಿಂಗ್ ಗೆ ಬಳಸುವ ರಟ್ಟಿನ ಪೆಟ್ಟಿಗೆಯನ್ನು ಕಾಲಿನ ಎರಡೂ ಬದಿಯಲ್ಲಿ ಇರಿಸಿ ಬ್ಯಾಂಡೇಜ್ನಿಂದ ಕಟ್ಟಿದ ಘಟನೆ ಬಿಹಾರದ ಬೇಗುಸರೈ ಜಿಲ್ಲೆಯ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ.
ಈ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.
ನವಕೋಥಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ವರ ಗ್ರಾಮದ ನಿವಾಸಿ ಕುನಾಲ್ ಕುಮಾರ್ ಅವರು ಆಗಸ್ಟ್ 3ರ ಸಂಜೆ ಹರ್ಸೈನ್ ಸೇತುವೆ ಬಳಿ ಸಂಭವಿಸಿದ ಮೋಟಾರ್ಸೈಕಲ್ ಅಪಘಾತದಲ್ಲಿ ಗಾಯಗೊಂಡಿದ್ದರು. ಅಪಘಾತದಲ್ಲಿ ಅವರ ಕಾಲು ಮುರಿದಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಅವರನ್ನು ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.
ಕುಟುಂಬದ ಸದಸ್ಯರ ಪ್ರಕಾರ, ಆಸ್ಪತ್ರೆ ಸಿಬ್ಬಂದಿ ಮುರಿದ ಕಾಲಿನ ಎರಡೂ ಬದಿಗಳಲ್ಲಿ ಔಷಧಿ ಪ್ಯಾಕಿಂಗ್ ಗೆ ಬಳಸುವ ರಟ್ಟಿನ ಪೆಟ್ಟಿಗೆಯ ತುಂಡುಗಳನ್ನು ಇರಿಸಿ, ಬ್ಯಾಂಡೇಜ್ ಹಾಗೂ ಹಗ್ಗದ ಮೂಲಕ ಬಿಗಿಯಾಗಿ ಕಟ್ಟಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇಗುಸರೈನ ಸದರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕುನಾಲ್ ಕುಮಾರ್ ಅವರ ಕಾಲಿಗೆ ರಟ್ಟಿನ ಪೆಟ್ಟಿಗೆಯನ್ನು ಕಟ್ಟಿರುವುದು ಕಂಡುಬಂದಿದ್ದು, ಸರಕಾರಿ ಆಸ್ಪತ್ರೆಯ ಚಿಕಿತ್ಸಾ ಕ್ರಮದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಆಸ್ಪತ್ರೆಯ ಉಸ್ತುವಾರಿ ಡಾ. ಅಭಿನವ್ ಪ್ರಿಯದರ್ಶಿ ಆಸ್ಪತ್ರೆ ಸಿಬ್ಬಂದಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮೂಳೆ ಮುರಿದಾಗ ಪೀಡಿತ ಭಾಗ ಅಲುಗಾಡದಂತೆ ನಿಶ್ಚಲ ಸ್ಥಿತಿಯಲ್ಲಿ ಇರಿಸುವುದು ಅಗತ್ಯವಾಗಿದ್ದು, ಅದಕ್ಕಾಗಿ ಲಭ್ಯವಿದ್ದ ರಟ್ಟಿನ ಪೆಟ್ಟಿಗೆಯನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆ ನಡೆದ ವೇಳೆ ಆಸ್ಪತ್ರೆಯಲ್ಲಿ ಮೂಳೆ ತಜ್ಞ ವೈದ್ಯರು ಅಥವಾ ಡ್ರೆಸ್ಸರ್ ಕರ್ತವ್ಯದಲ್ಲಿರಲಿಲ್ಲ. ಅಲ್ಲದೆ, ಪ್ಲಾಸ್ಟರ್ ಹಾಕುವ ಸೌಲಭ್ಯವೂ ಲಭ್ಯವಿರಲಿಲ್ಲ. ಹೀಗಾಗಿ ರೋಗಿಯನ್ನು ಉನ್ನತ ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ವೈದ್ಯಕೀಯ ನಿಯಮಾನುಸಾರ ಲಭ್ಯವಿದ್ದ ವಸ್ತುವನ್ನೇ ಬಳಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬೇಗುಸರೈ ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದು, ತನಿಖೆಯಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಮುರಿದ ಅಂಗವನ್ನು ನಿಶ್ಚಲವಾಗಿಡುವುದು ಮಾನ್ಯ ವಿಧಾನವಾಗಿದ್ದರೂ, ಈ ಪ್ರಕರಣದಲ್ಲಿ ಅದನ್ನು ಯಾವ ಸಂದರ್ಭಗಳಲ್ಲಿ ಬಳಸಲಾಯಿತು ಎಂಬುದನ್ನು ತನಿಖೆಯಲ್ಲಿ ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

