ನವದೆಹಲಿ: ಆ. 5ರಂದು META ಪ್ಲ್ಯಾಟ್ ಫಾರ್ಮ್ ಗಳ ಮುಖ್ಯ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯೆಲ್ ಕಪ್ಲಾನ್ ಅವರು ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟ್ವೊಂದನ್ನು ಸಂಕ್ಷಿಪ್ತವಾಗಿ ನಿರ್ಬಂಧಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಈ ಕ್ಷಮೆಯಾಚನೆಯ ನಡುವೆಯೇ META ಕೇಂದ್ರ ಸರಕಾರ ಮತ್ತು BJP ವಿರುದ್ಧ ಕಂಟೆಂಟ್ ಗಳಿಗೆ ಸಂಬಂಧಿಸಿದಂತೆ ತನ್ನ ಸೆನ್ಸಾರ್ ಶಿಪ್ ಅನ್ನು ತೀವ್ರವಾಗಿ ಹೆಚ್ಚಿಸಿದೆ.
ಆಗಸ್ಟ್ ಆರಂಭದಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಮೋದಿ ಅವರ ಪೋಸ್ಟ್ ಒಂದನ್ನು METAದ ಸ್ವಯಂಚಾಲಿತ ವ್ಯವಸ್ಥೆಯು ಆಕಸ್ಮಿಕವಾಗಿ ನಿರ್ಬಂಧಿಸಿತ್ತು. ಈ ತಾತ್ಕಾಲಿಕ ನಿರ್ಬಂಧವು AI ವ್ಯವಸ್ಥೆಯ ತಾಂತ್ರಿಕ ದೋಷದಿಂದ ಆಗಿದೆ ಎಂದು META ಸ್ಪಷ್ಟನೆ ನೀಡಿದೆ.
ಈ ಕ್ಷಮಾಪಣೆಯ ನಂತರ META ಯಾವುದೇ ವಿವರಣೆ ನೀಡದೆ ಪತ್ರಕರ್ತರು, ರಾಜಕಾರಣಿಗಳು, ಮಾಧ್ಯಮ ಸಂಸ್ಥೆಗಳ ಕಂಟೆಂಟ್ ಗಳನ್ನು ಸರಣಿಯೋಪಾದಿಯಾಗಿ ತೆಗೆದುಹಾಕುತ್ತಿದೆ.
ಆ. 6ರಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ, ತಾವು ಪದೇ ಪದೇ ಕೋರಿದ್ದರೂ META ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಹೇಳಿದ್ದರು.
ಮಾಧ್ಯಮ ಸಂಸ್ಥೆಗಳಾದ 'the wire', 'scroll.in' ಮತ್ತು 'the hindu' ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಪ್ರಮುಖ ತನಿಖಾ ವರದಿಗಳು, ವೀಡಿಯೋ ವಿವರಣೆಗಳು ಮತ್ತು ಸೂಕ್ಷ್ಮ ರಾಜಕೀಯ ಅಥವಾ ಕಾನೂನು ಪ್ರಕ್ರಿಯೆಗಳ ಕುರಿತಾದ ಪೋಸ್ಟ್ ಗಳನ್ನು ತೆಗೆದುಹಾಕಲಾಗಿದೆ ಅಥವಾ ಭಾರತದಲ್ಲಿ ನಿರ್ಬಂಧಿಸಲಾಗಿದೆ.
META ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ನಡುವೆ ಸಭೆಯ ಬಳಿಕ CJP ಸದಸ್ಯರು ಮತ್ತು ಇತರ ಪ್ರತಿಭಟನಾಕಾರರ ಇನ್ಸ್ಟಾಗ್ರಾಮ್ ಪೋಸ್ಟ್ ಗಳನ್ನೂ ತೆಗೆದುಹಾಕಲಾಗಿದೆ. Altnews.in ಸಹಸ್ಥಾಪಕ ಮುಹಮ್ಮದ್ ಝುಬೈರ್ ಮತ್ತು ರಾಜಕೀಯ ಕಂಟೆಂಟ್ ಕ್ರಿಯೇಟರ್ ಸೃಷ್ಟಿ ಖನ್ನಾ ಅವರ ಪೋಸ್ಟ್ ಗಳು ತೆಗೆದುಹಾಕಲ್ಪಟ್ಟಿವೆ ಮತ್ತು ಅಮಾನತುಗೊಂಡಿವೆ.
ಭಾರತೀಯ ಯುವ ಕಾಂಗ್ರೆಸ್, CJP ವಕ್ತಾರ ಸೌರವ್ ದಾಸ್ ಅವರ ಪೋಸ್ಟ್ ಗಳನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿದೆ.
META ಕಾಶ್ಮೀರದ ಪೆಲೆಟ್ ಸಂತ್ರಸ್ತೆ ಇನ್ಶಾ ಮುಷ್ತಾಕ್ ಕುರಿತು 'the hindu' ವರದಿಯನ್ನು ತನ್ನ ವೇದಿಕೆ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ನಿರ್ಬಂಧಿಸಿದೆ. ಪರಿಹಾರಕ್ಕಾಗಿ ಕಾಯುತ್ತಿರುವ ಕಾಶ್ಮೀರಿ ಪೆಲೆಟ್ ಸಂತ್ರಸ್ತರ ಸಂಕಷ್ಟಗಳ ಕುರಿತು scroll.in ಇನ್ಸ್ಟಾಗ್ರಾಂ ಪೋಸ್ಟ್ ಅನ್ನು ಸೆನ್ಸಾರ್ ಮಾಡಲಾಗಿದೆ. ಅಮೃತಸರದಲ್ಲಿ ಮಾಂಸ ನಿಷೇಧ ಮತ್ತು ಖಾಲಿಸ್ತಾನಿ ನಾಯಕನೋರ್ವನ ಹತ್ಯೆ ಒಳಸಂಚಿಗೆ ಸಂಬಂಧಿಸಿದ ಅಮೆರಿಕದಲ್ಲಿಯ ಪ್ರಕರಣ ಕುರಿತು scroll.in ವರದಿಗಳನ್ನೂ ನಿರ್ಬಂಧಿಸಲಾಗಿದೆ.
ತಂತ್ರಜ್ಞಾನ, ಕಾನೂನು ಮತ್ತು ನಾಗರಿಕ ಸ್ವಾತಂತ್ರ್ಯದ ಅಡಚಣೆಗಳ ಮೇಲೆ ನಿಗಾಯಿರಿಸುವ ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್ ನ ಫ್ರೀ ಸ್ಪೀಚ್ ಟ್ರ್ಯಾಕರ್ ಈಗಾಗಲೇ ಪ್ರತಿಭಟನೆಗೆ ಸಂಬಂಧಿತ ಕಂಟೆಂಟ್ ಗಳನ್ನು ತೆಗೆದುಹಾಕಿರುವ ಮತ್ತು ಖಾತೆ ನಿರ್ಬಂಧಗಳ 80ಕ್ಕೂ ಅಧಿಕ ನಿದರ್ಶನಗಳನ್ನು ದಾಖಲಿಸಿದೆ.
ಈ ನಡುವೆ META ಇತ್ತೀಚಿನ ಕೆಲವು ಉನ್ನತ ಮಟ್ಟದ ನಿರ್ಬಂಧಗಳನ್ನು ಕಾರ್ಯಾಚರಣೆಯಲ್ಲಿನ ತಪ್ಪುಗಳು ಎಂದು ಬಣ್ಣಿಸಿದೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ ಪ್ರಧಾನಿಯ ಖಾತೆಯನ್ನು ಸಂಕ್ಷಿಪ್ತವಾಗಿ ನಿರ್ಬಂಧಿಸಿದಾಗ ಅದು ಕೆಲವೇ ವಾರಗಳಲ್ಲಿ ಸರಕಾರದ ಕ್ಷಮೆಯನ್ನು ಯಾಚಿಸಿತು. ಆದರೆ ಪ್ರಧಾನಿಯನ್ನು ವಿರೋಧಿಸುವ ರಾಜಕಾರಣಿಗಳು, ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಕಂಟೆಂಟ್ ಗಳನ್ನು ನಿರ್ಬಂಧಿಸಿದ್ದರೂ ಯಾವುದೇ ವಿವರಣೆ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು META ನೀಡುತ್ತಿಲ್ಲ.

