ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಿರುವಂತೆಯೇ, ವ್ಯಾಪಾರ, ರಕ್ಷಣೆ ಹಾಗೂ ಇಂಧನ ಭದ್ರತೆ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರದ ಸಂಬಂಧಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಶನಿವಾರ ರಾತ್ರಿ ಮಾತುಕತೆ ನಡೆಸಿದ್ದಾರೆ.
ವಿರಳ ಖನಿಜಗಳ ಸ್ಥಿರ ಪೂರೈಕೆ ಹಾಗೂ ನವೀನ ತಂತ್ರಜ್ಞಾನಗಳಲ್ಲಿ ಸಹಕಾರ ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದಾರೆ.
ಟರ್ಕಿ, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನವು ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ದಿನಗಳ ಅಂತರದಲ್ಲಿಯೇ ವ್ಯಾನ್ಸ್ ಅವರು ಕರೆ ಮಾಡಿ ಮಾತನಾಡಿದ್ದಾರೆ. ಈ ಒಪ್ಪಂದವು ಪಶ್ಚಿಮ ಏಷ್ಯಾ ಸಂಘರ್ಷದ ಬಳಿಕ ಏರ್ಪಟ್ಟ ಹೊಸ ಪ್ರಾದೇಶಿಕ ಬಲವರ್ಧನೆಯ ಪ್ರತಿಬಿಂಬ ಎಂದೇ ವಿಶ್ಲೇಷಿಸಲಾಗಿದೆ.
ಮತ್ತೊಂದು ಮಗುವಿಗೆ ಜನ್ಮ ನೀಡಿದ ವ್ಯಾನ್ಸ್ ಅವರ ಪತ್ನಿ ಉಷಾ ಅವರಿಗೂ ಪ್ರಧಾನಿ ಮೋದಿ ಅವರು ಮಾತುಕತೆ ವೇಳೆ ಅಭಿನಂದನೆ ಸಲ್ಲಿಸಿದರು.
'ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಜೊತೆಗೆ ದೂರವಾಣಿ ಮಾತುಕತೆ ನಡೆಸಿದ್ದು, ಪ್ರಮುಖ ಕ್ಷೇತ್ರಗಳಲ್ಲಿ ಸಮಗ್ರ ಜಾಗತಿಕ ಕಾರ್ಯತಂತ್ರ ಸಹಭಾಗಿತ್ವವನ್ನು ಮತ್ತಷ್ಟು ಸುಧಾರಿಸುವ ಕುರಿತು ಚರ್ಚೆ ನಡೆಸಲಾಯಿತು' ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ಪರಸ್ಪರ ಆಸಕ್ತಿಯ ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಯಿತು' ಎಂದು ವಿವರಿಸಿದ್ದಾರೆ.
ಮಾತುಕತೆಯ ಕುರಿತು ಅಮೆರಿಕವು ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.


