ನವದೆಹಲಿ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆಯಾದ ಏಳು ತಿಂಗಳ ಬಳಿಕ, ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು 30 ವರ್ಷದ ಹಿಮಾನ್ಶಿ ಖುರಾನಾ ಎಂದು ಗುರುತಿಸಲಾಗಿತ್ತು. ಟೊರೊಂಟೊದ ಮನೆಯೊಂದರಲ್ಲಿ ಹಿಮಾನ್ಶಿ ಮೃತರಾಗಿ ಪತ್ತೆಯಾಗಿದ್ದರು.
2025ರ ಡಿಸೆಂಬರ್ 20 ರಂದು ಈ ಘಟನೆ ನಡೆದಿತ್ತು.
ಈ ಪ್ರಕರಣದ ಆರೋಪಿಯಾಗಿದ್ದ ಹಿಮಾನ್ಶಿ ಗೆಳೆಯ ಅಬ್ದುಲ್ ಗಫೂರಿ (32)ಯನ್ನು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಕೆನಡಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆತ ಯಾವ ದೇಶದಲ್ಲಿದ್ದ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸದ ಪೊಲೀಸರು ಅಂತರರಾಷ್ಟ್ರೀಯ ಪೊಲೀಸ್ ಸೇವೆಗಳೊಂದಿಗೆ ಸಮನ್ವಯ ಸಾಧಿಸಿ ಗಫೂರಿಯನ್ನು ಕೆನಡಾಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಿಮಾನ್ಶಿ ಖುರಾನಾ ಮತ್ತು ಅಬ್ದುಲ್ ಗಫೂರಿ ಮೂರು ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದರು. ಹಿಮಾನ್ಶಿ ಕೊಲೆಯಾದ ಬಳಿಕ ಅಬ್ದುಲ್ ಗಫೂರಿ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗಫೂರಿ ಬಂಧನಕ್ಕಾಗಿ ದೇಶವ್ಯಾಪಿ ವಾರೆಂಟ್ ಹೊರಡಿಸಿದ್ದ ಪೊಲೀಸರು, ಆತನ ಫೋಟೊವನ್ನು ಬಿಡುಗಡೆ ಮಾಡಿ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದರು.

