HEALTH TIPS

ವಿದ್ಯಾರ್ಥಿಗಳ ಜತೆಗಿನ ರಾಹುಲ್ ಸಂವಾದಕ್ಕಿಲ್ಲ ಅನುಮತಿ: BJP ವಿರುದ್ಧ 'ಕೈ' ಕಿಡಿ

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಗದಿತ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮಕ್ಕೆ ಮೈದಾನದ ಉಸ್ತುವಾರಿ ವಹಿಸಿರುವ ಕಾಯಸ್ಥ ಪಾಠಶಾಲಾ ಟ್ರಸ್ಟ್ ಅನುಮತಿ ರದ್ದುಗೊಳಿಸಿದೆ.

ಇದೇ ವಿಚಾರ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. 


‌ಆಗಸ್ಟ್ 8ರಂದು ಪ್ರಯಾಗರಾಜ್‌ನಲ್ಲಿ ನಡೆಯಲಿರುವ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಎರಡು ದಿನ ಬಾಕಿ ಇರುವಾಗಲೇ ಮೈದಾನದ ಉಸ್ತುವಾರಿ ವಹಿಸಿರುವ ಟ್ರಸ್ಟ್ ಅನುಮತಿ ಹಿಂಪಡೆದಿದೆ.

ಕಾರ್ಯಕ್ರಮ ಆಯೋಜಿಸಲಾಗಿದ್ದ ಕೆಪಿ ಮೈದಾನದ ಮಾಲೀಕತ್ವ ಹೊಂದಿರುವ ಕಾಯಸ್ಥ ಪಾಠಶಾಲಾ ಟ್ರಸ್ಟ್, ಅಲಹಾಬಾದ್ ಹೈಕೋರ್ಟ್ ಆದೇಶ ಉಲ್ಲೇಖಿಸಿ ಅನುಮತಿ ರದ್ದುಗೊಳಿಸಿದೆ ಎಂದು ವರದಿಯಾಗಿದೆ.

'2025ರ ಆಗಸ್ಟ್ 14ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದಂತೆ ಕೆಪಿ ಕಾಲೇಜು ಮೈದಾನವನ್ನು ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಬಳಸಬಾರದು ಎಂದು ನಿರ್ದೇಶನ ನೀಡಿದೆ' ಎಂದು ಟ್ರಸ್ಟ್‌ನ ಹಂಗಾಮಿ ಅಧ್ಯಕ್ಷ ಜಿತೇಂದ್ರ ನಾಥ್ ಚೌಧರಿ ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿದ್ದು, ಸಾರ್ವಜನಿಕ ಕಾರ್ಯಕ್ರಮಕ್ಕೆ ಸುರಕ್ಷಿತವಾಗಿಲ್ಲ. ರಾಹುಲ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ವಿಚಾರ ಜಿಲ್ಲಾಧಿಕಾರಿ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ಒತ್ತಡದಿಂದಾಗಿ ಅನುಮತಿ ರದ್ದುಪಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜತೆಗೆ, ರಾಹುಲ್‌ ಅವರ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ ಎಂದೂ ಸ್ಪಷ್ಟಪಡಿಸಿದೆ.

ಅನುಮತಿ ರದ್ದಾಗಿರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, 'ಅವರಿಗೆ (ಬಿಜೆಪಿಯವರಿಗೆ) ಏನು ಭಯವೋ ತಿಳಿಯುತ್ತಿಲ್ಲ' ಎಂದಿದ್ದಾರೆ.

ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಯಾಗರಾಜ್‌ಗೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, 'ಕೆಪಿ ಟ್ರಸ್ಟ್ ಅನುಮತಿಯನ್ನು ರದ್ದುಗೊಳಿಸಿದ್ದರೂ ರಾಹುಲ್ ಗಾಂಧಿ ಅವರು ಆಗಸ್ಟ್ 8ರಂದು ಇಲ್ಲಿಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ' ಎಂದು ಹೇಳಿದ್ದಾರೆ.

'ರಾಹುಲ್ ಗಾಂಧಿ ಅವರು ಪ್ರಯಾಗರಾಜ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದನ್ನು ತಡೆಯಲು ಬಿಜೆಪಿ ಮಾಡುತ್ತಿರುವ ಒತ್ತಡದ ತಂತ್ರವಾಗಿದೆ. ಆದರೆ, ಅನುಮತಿ ಸಿಗಲಿ, ಸಿಗದಿರಲಿ... ರಾಹುಲ್‌ ಬಂದೇ ಬರುತ್ತಾರೆ' ಎಂದಿದ್ದಾರೆ.

ನಾವು ಜುಲೈ 30ರಂದೇ ಅನುಮತಿ ಪಡೆದುಕೊಂಡಿದ್ದು, ₹51,000 ಶುಲ್ಕವನ್ನೂ ಪಾವತಿಸಿದ್ದೇವೆ ಎಂದು ರಾಯ್ ತಿಳಿಸಿದ್ದಾರೆ.

ಕೋಟಾ ಮತ್ತು ಡೆಹ್ರಾಡೂನ್‌ನಲ್ಲೂ ರಾಹುಲ್ ಗಾಂಧಿ ಕಾರ್ಯಕ್ರಮಗಳಿಗೆ ನೀಡಿದ್ದ ಅನುಮತಿಯನ್ನು ಇದೇ ರೀತಿ ರದ್ದುಗೊಳಿಸಲಾಗಿತ್ತು. ನಂತರ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕಾಯಿತು ಎಂದು ವಿವರಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries