ನವದೆಹಲಿ: ರಾಮಮಂದಿರದ ದೇಣಿಗೆ ಕಳುವಿನ ಆರೋಪದ ಕುರಿತು ಸಂಸತ್ತಿನಲ್ಲಿ ಉತ್ತರಿಸಲು ಬಿಜೆಪಿ ನೇತೃತ್ವದ ಸರ್ಕಾರ ನಿರಾಕರಿಸುತ್ತಿದ್ದು, ಅದನ್ನು 'ರಾಜ್ಯದ ವಿಷಯ' ಎಂದು ಕರೆಯುತ್ತಿದೆ. ಆದರೆ ಲೋಕಸಭಾ ಚುನಾವಣೆಗೆ ಮುನ್ನ ಮಂದಿರದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಿಂಜರಿಯಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ(ಆ.12) ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರವನ್ನು ಉದ್ಘಾಟಿಸಿದರು. ಅವರು ಯಾವುದೋ ಒಂದು ರಾಜ್ಯದ ಪ್ರಧಾನಿಯಲ್ಲ, ಇಡೀ ದೇಶದ ಪ್ರಧಾನಿ. ಉದ್ಘಾಟನೆಗೆ ದೇಶದಾದ್ಯಂತ ಜನರು ಬಂದಿದ್ದರು. ಇದೀಗ ಬಡ ಜನರು ಮಂದಿರಕ್ಕಾಗಿ ಎಂದು ತಿಳಿದು ಶ್ರದ್ಧೆಯಿಂದ ನೀಡಿದ ದೇಣಿಗೆ ಮಾಯವಾಗಿದೆ. ಈಗ ಅವರು ಇದು ರಾಜ್ಯದ ವಿಷಯ, ಹಾಗಾಗಿ ಸಂಸತ್ತಿನಲ್ಲಿ ಉತ್ತರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಮುಂಗಾರು ಅಧಿವೇಶನ ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ ಸಂಸತ್ತಿನಲ್ಲಿ ಕಲಾಪದ ಬಿಕ್ಕಟ್ಟು ಮುಂದುವರಿದಿರುವ ಕುರಿತು ಸಂಸತ್ ಭವನದ ಸಂಕೀರ್ಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಇದಕ್ಕೆ ಯಾರು ಕಾರಣ ಎಂದು ನೀವು ಭಾವಿಸುತ್ತೀರಿ? ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದಾಗ, ಪೆಲೆಟ್ ಗನ್ ಬಳಸಿದಾಗ ಮತ್ತು ಬಿಹಾರದಲ್ಲಿ ಅವರ ವಿರುದ್ಧ ಎಕೆ-47 ಬಳಸಿದಾಗ ಗೃಹ ಸಚಿವ ಅಮಿತ್ ಶಾ ಜನರಿಗೆ ಉತ್ತರಿಸಬೇಕಿಲ್ಲವೇ? ಮಾಧ್ಯಮಗಳಂತೆ ನಾವೂ ಸುಮ್ಮನೆ ಕುಳಿತುಕೊಳ್ಳಬೇಕೇ' ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಜನರ ಬಗ್ಗೆ ಹೊಣೆಗಾರಿಕೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಏಕೆಂದರೆ ಕಲಾಪವು ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮತ್ತು ಹೇಳಿಕೆ ನೀಡಬೇಕಾದ ವೇದಿಕೆಯಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ದೇಶದಾದ್ಯಂತ ಯುವಕರು ರಸ್ತೆಗಿಳಿದರು. ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು, ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲಾಯಿತು. ಬಿಹಾರದಲ್ಲಿ ಪ್ರತಿಭಟನಾಕಾರರ ವಿರುದ್ಧ ಎಕೆ-47 ಬಳಸಲಾಯಿತು. ಆದರೆ, ಇದಕ್ಕೆಲ್ಲ ಉತ್ತರ ನೀಡಬೇಕು ಮತ್ತು ಇದು ಹೇಗೆ ಸಂಭವಿಸಿತು ಎಂಬುದರ ಕುರಿತು ಹೇಳಿಕೆ ನೀಡಬೇಕು ಎಂದು ಸರ್ಕಾರಕ್ಕೆ ಅನಿಸುತ್ತಿಲ್ಲ. ಇದಕ್ಕೆಲ್ಲ ಯಾರು ಆದೇಶ ನೀಡಿದ್ದು ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಕಲಾಪಕ್ಕೆ ಆಗಮಿಸಿ ಇದಕ್ಕೆಲ್ಲ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

