ಕಾಸರಗೋಡು: ಬಿಎಂಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್ ಸಂಸ್ಮರಣಾ ಸಮಾರಂಭ ಕಾಸರಗೋಡಿನ ರೋಟರಿ ಭವನದಲ್ಲಿ ಜರುಗಿತು. ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಉಪೇಂದ್ರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್ ಸಂಸ್ಮರಣಾ ಭಾಷಣ ಮಾಡಿದರು. ವಿವಿಧ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಐಎನ್ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ವಿ. ಕುಞÂರಾಮನ್, ವಿಎಚ್ಪಿ ವಿಭಾಗ ಪ್ರಮುಖ್ ಸಂಕಪ್ಪ ಭಂಡಾರಿ, ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಪಿ. ಮುರಳೀಧರನ್ ಮತ್ತು ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಸಂಸ್ಮರಣಾ ಮಾತುಗಳನ್ನಾಡಿ, ಜಿ.ಕೆಅಜಿತ್ ಅವರು ಕಾರ್ಮಿಕ ಸಂಘಟನೆಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ನಾಯಕ ಎಂದು ತಿಳಿಸಿ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಸಂಘಟನಾತ್ಮಕ ಚಟುವಟಿಕೆಗಳನ್ನು ಮುನ್ನಡೆಸುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕೋವಿಡ್-19 ಅವಧಿಯಲ್ಲಿ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ ನೆರವು ನೀಡಲು ಸಂಘಟನೆಯು ಕೈಗೊಂಡಿದ್ದ 'ಸೇವಾನಿಧಿ' ಆರ್ಥಿಕ ನೆರವಿನ ಯೋಜನೆಯನ್ನು ಜಾರಿಗೆ ತರುವಲ್ಲಿ ಅವರು ವಹಿಸಿದ ಪಾತ್ರವನ್ನೂ ಈ ಸಭೆಯಲ್ಲಿ ಉಲ್ಲೇಖಿಸಲಾಯಿತು.
ಸಭೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಬಿಎಂಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸ್ವಾಗತಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ದಿನೇಶ್ ಬಂಬ್ರಾಣ ವಂದಿಸಿದರು.

