ಕಾಸರಗೋಡು: 'ದಕ್ಷಿಣ ಕಾಶಿ' ಎಂದೇ ಪ್ರಸಿದ್ಧಿಪಡೆದಿರುವ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಾಲಯದಲ್ಲಿ, ಕರ್ಕಾಟಕ ಅಮವಾಸ್ಯೆ ಅಂಗವಾಗಿ ಪಿತೃ ತರ್ಪಣ ಕಾರ್ಯಕ್ರಮ ಬುಧವಾರ ಜರುಗಿತು.
ಗತಿಸಿದ ಹಿರಿಯರಿಗೆ ತರ್ಪಣ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ತ್ರಕ್ಕನ್ನಾಡು ಕ್ಷೇತ್ರಕ್ಕೆ ಆಗಮಿಸಿದ್ದರು.
ಬೆಳಗ್ಗಿನ ಜಾವ 4ಕ್ಕೇ ಭಕ್ತರು ಕ್ಷೇತ್ರಕ್ಕೆ ಬರಲಾರಂಭಿಸಿದ್ದರು. 'ಉಷ: ಪೂಜೆ'ಯ ನಂತರ, 5.30ಕ್ಕೆ ದೇವಾಲಯದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ನಿರ್ಮಿಸಲಾದ ಚಪ್ಪರದಲ್ಲಿ ಪಿತೃತರ್ಪಣ ವಿಧಿವಿಧಾನ ಆರಂಭಗೊಂಡಿತು. ಮುಖ್ಯ ಅರ್ಚಕ ಬ್ರಹ್ಮಶ್ರೀ ನವೀನ್‍ಚಂದ್ರ ಕಾಯರ್ತಾಯ ಅವರ ನೇತೃತ್ವ ಹಾಗೂ ದೇವಾಲಯದ ಅರ್ಚಕ ಶ್ರೀ ರಾಜೇಂದ್ರ ಅರಳಿತ್ತಾಯ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನೆರವೇರಿತು. ಇಪ್ಪತ್ತಕ್ಕೂ ಹೆಚ್ಚು ಮಂದಿ ಅರ್ಚಕರು ಏಕಕಾಲದಲ್ಲಿ ವಿಧಿವಿಧಾನ ನೆರವೇರಿಸಿದರು.
ಮುಂಗಡ ಪಾವತಿ ಮೂಲಕ ಆನ್‍ಲೈನ್‍ನಲ್ಲಿ ರಸೀದಿ ಪಡೆದವರು ಹಗೂ ದೇವಾಲಯಕ್ಕೆ ಭೇಟಿ ನೀಡಿ ರಸೀದಿ ಪಡೆದ ಭಕ್ತಾದಿಗಳು ಪಿತೃತರ್ಪಣದಲ್ಲಿ ಪಾಲ್ಗೊಂಡಿದ್ದರು.
ಬಲಿ ತರ್ಪಣದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಪೆÇಲೀಸ್, ಕರಾವಳಿ ಕಾವಲು ಪಡೆ ಮತ್ತು ಆರೋಗ್ಯ ಇಲಾಖೆ ಸಹಕಾರ ಒದಗಿಸಿತು. ಮಳೆ ಅಲ್ಪ ತಗ್ಗಿದ ಹಿನ್ನೆಲೆಯಲ್ಲಿ ಪಿತೃತರ್ಪಣಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವರದಾನವಾಗಿ ಪರಿಣಮಿಸಿತ್ತು. ಸಮುದ್ರ ಎಂದಿನಂತೆ ಪ್ರಕ್ಷುಬ್ದವಾಗಿ ಮುಂದುವರಿದಿತ್ತು.

