ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ವಂದೇ ಮಾತರಂ ಹಾಡಿಗೆ ಅಪಮಾನಗೊಳಿಸುವ ವಿ.ಡಿ. ಸತೀಶನ್ ಸರ್ಕಾರದ ಹಾಗೂ ಕಾಂಗ್ರೆಸ್, ಮುಸ್ಲಿಂ ಲೀಗ್, ಸಿ.ಪಿ.ಎಂ. ಸೇರಿದಂತೆ ವಿವಿಧ ಪಕ್ಷಗಳ ನಾಯಕರ ಯತ್ನವನ್ನು ಸಹಿಸಲಾಗದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವ ರಸಪ್ರಶ್ನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಹೆಸರು ಒಳಗೊಂಡ ಪ್ರಶ್ನೆಯಲ್ಲಿನ ತಾಂತ್ರಿಕ ದೋಷವನ್ನು ಪ್ರಶ್ನಿಸುವ ಬದಲು, ಉತ್ತರವಾಗಿ "ವಿನಾಯಕ ದಾಮೋದರ ಸಾವರ್ಕರ್" ಎಂಬ ಹೆಸರು ಬಂದಿರುವುದನ್ನೇ ಸಂಪೂರ್ಣವಾಗಿ ವಿರೋಧಿಸುವ ಸರ್ಕಾರದ ನಿಲುವು ಅತ್ಯಂತ ಖಂಡನೀಯ.
ಗುರುಪ್ರಸಾದ್ ಎಂಬ ಶಿಕ್ಷಕ ಕ್ವಿಜ್ ಸ್ಪರ್ಧೆಯ ಮೇಲ್ವಿಚಾರಣೆಯನ್ನು ಮಾತ್ರ ವಹಿಸಿದ್ದರು. "ಅತಿ ಹೆಚ್ಚು ಜೈಲು ಶಿಕ್ಷೆ" ಎಂಬುದರ ಬದಲು "ಅತಿ ಹೆಚ್ಚು ಶಿಕ್ಷೆ" ಎಂಬ ರೀತಿಯಲ್ಲಿ ಪ್ರಶ್ನೆ ಬಂದಿದ್ದನ್ನು ತಾಂತ್ರಿಕ ಅಥವಾ ವ್ಯಾಕರಣದ ದೋಷವಾಗಿ ನೋಡುವ ಬದಲು, ಅದರ ನೆಪದಲ್ಲಿ ವೀರ ಸಾವರ್ಕರ್ ಅವರ ದೇಶಪ್ರೇಮ ಹಾಗೂ ಕಠಿಣ ಜೈಲುವಾಸವನ್ನು ಪ್ರಶ್ನಿಸುವ ಯತ್ನ ನಡೆಯುತ್ತಿರುವುದು ವಿಷಾದನೀಯ. ಪ್ರಶ್ನೆಪತ್ರಿಕೆ ತಯಾರಿಸಿದ ಶಿಕ್ಷಕಿಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಬೇಕು. ವೀರ ಸಾವರ್ಕರ್ ಎಂಬ ಹೆಸರು ಕೇಳಿದ ತಕ್ಷಣವೇ ಕೆಲವರು ತೀವ್ರವಾಗಿ ಉದ್ರೇಕಗೊಳ್ಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ನಾಡಿನ ದೇಶಪ್ರೇಮಿಗಳಿಗೆ ಆಸಕ್ತಿಯಿದೆ. ಇತಿಹಾಸವನ್ನು ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ತಿರುಚುವ ಸರ್ಕಾರದ ಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಶ್ವಿನಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಉಪಸ್ಥಿತರಿದ್ದರು.


