ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಗುಮಾಸ್ತೆ ಎ. ಆಶಾಲತಾ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಅವರಿಗೆ ಸೂಚಿಸಿದ್ದಾರೆ.
ವಿದ್ಯಾನಗರ ಪೆÇಲೀಸರು ನಡೆಸುತ್ತಿರುವ ತನಿಖೆಯ ಜತೆಗೆ ಅಧಿಕಾರಿ ಮಟ್ಟದ ಪ್ರತ್ಯೇಕ ತನಿಖೆಯೂ ನಡೆಯಲಿದೆ. ಇಲಿವಿಷ ಸೇವಿಸಿ ಚೆಂಗಳದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಶಾಲತಾ ಅವರಿಂದ ಆಗಸ್ಟ್ 7 ರಂದು ಅವರ ಸಂಬಂಧಿಕರ ಉಪಸ್ಥಿತಿಯಲ್ಲಿ ವಿದ್ಯಾನಗರ ಠಾಣೆ ಪೆÇಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಸಂದರ್ಭ ಐಸ್‍ಕ್ರೀಮ್‍ನಲ್ಲಿ ಇಲಿ ವಿಷದ ಪೇಸ್ಟ್ ಬೆರೆಸಿ, ಇದನ್ನು ನನ್ನ ಸ್ವಇಚ್ಛೆಯಿಂದಲೇ ಸೇವಿಸಿದ್ದೇನೆ. ಮನೆ ಮತ್ತು ಕಚೇರಿ ಎರಡೂಕಡೆ ನಾನು ಏಕಾಂಗಿತನದಿಂದ ಅನುಭವಿಸುತ್ತಿದ್ದ ಮಾನಸಿಕ ಖಿನ್ನತೆ ನನ್ನನ್ನು ಭಾವನಾತ್ಮಕವಾಗಿ ತೀವ್ರವಾಗಿ ಕುಗ್ಗುವಂತೆ ಮಾಡಿತ್ತು. ನನಗೆ ಯಾರ ಮೇಲೂ ಯಾವುದೇ ದೂರುಗಳಿಲ್ಲ ಎಂಬುದಾಗಿ ಆಶಾಲತಾ ಹೇಳಿಕೆ ನಿಡಿದ್ದರು.
ನಂತರ ಆರೋಗ್ಯಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಇವರನ್ನು ಕೋಯಿಕ್ಕೋಡಿನ ಖಾಸಗಿ ಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಗಸ್ಟ್ 9 ರಂದು ಮೃತಪಟ್ಟಿದ್ದರು. ಮೇ 12 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಬ್ಲಾಕ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಎಂಡೋಸಲ್ಫಾನ್ ವಿಶೇಷ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾಲತಾ ಅವರು ಅಲ್ಲಿ ತಮ್ಮ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದ ಬಗ್ಗೆ ಎಂಡೋಸಲ್ಫಾನ್ ವಿಶೇಷ ಘಟಕದ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದರು. ಇಲಾಖಾ ಮಟ್ಟದ ತನಿಖೆಯ ವೇಳೆ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.



