ಕಾಸರಗೋಡು: ತೀವ್ರ ಸಮುದ್ರ ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತಮ್ಮ ಕೃಷಿ, ಮನೆಗಳು ಮತ್ತು ಭೂಮಿಯನ್ನು ಕಳೆದುಕೊಂಡವರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಉಪ್ಪಳ ಶಾರದಾನಗರ ಪ್ರದೇಶದ ಮೀನುಗಾರರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಮರ್ಪಿಸಿದರು. 'ಶಾರದನಗರ ಉಳಿಸಿ ಕ್ರಿಯಾ ಸಮಿತಿಯ' ಆಶ್ರಯದಲ್ಲಿ ಧರಣಿ ಆಯೋಜಿಸಲಾಗಿತ್ತು.
ವಿದ್ಯಾನಗರದಿಂದ ನೂರಾರು ಮಹಿಳೆಯರು ಒಳಗೊಂಡಂತೆ ಮೀನು ಕಾರ್ಮಿಕರು ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್ ಎಶ್ವಿನಿ ಧರಣಿ ಉದ್ಘಾಟಿಸಿ ಮಾತನಾಡಿ, ಶಾರದಾನಗರ ಸೇರಿದಂತೆ ಜಿಲ್ಲೆಯಲ್ಲಿ ಕಡಲ್ಕೊರೆತ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವ ಮೂಲಕ ಕರವಳಿಯ ಮೀನುಗಾರರಿಗೆ ರಕ್ಷಣೆ ಒದಗಿಸಬೇಕು. ಈ ನಿಟ್ಟಿನಲ್ಲಿ ಮಂಜೇಶ್ವರ ಶಾಸಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಮೀನುಗಾರರಿಗೆ ಪರಿಹಾರ ಸಿಗುವವರೆಗೂ ಮುಷ್ಕರ ಮುಂದುವರಿಯಲಿರುವುದಾಗಿ ತಿಳಿಸಿದರು.
ಶಾರದಾ ನಗರ ಕರಾವಳಿ ಕ್ರಿಯಾ ಸಮಿತಿಯ ಅಧ್ಯಕ್ಷ ಶಶಿಕಾಂತ್ ಕಡಪರಂ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಆರ್ ಸುನಿಲ್, ಸೆಲ್ ಕೋಡಿನೆಟರ್ ಸುಕುಮಾರ್ ಕುದ್ರೆಪಾಡಿ, ಮೀನುಗಾರ ಕಾರ್ಮಿಕರ ನೇತಾರ ಸುರೇಶ್ ಕೀಯೂರ್, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿಕ್ರಂ ಪೈ, ಶಾರದಾ ಭಜನಾ ಮಂದಿರ ಸಮಿತಿ ಅಧ್ಯಕ್ಷ ಜನಾರ್ದನ ಮೊಗವೀರಪಟ್ಟಣ, ವಾಮಂಜೂರು ಗುತ್ಯಮ್ಮ ಭಗವತಿ ಕ್ಷೇತ್ರದ ಅಧ್ಯಕ್ಷ ಆನಂದ ಎಸ್ ಐಲ್, ಕಾರ್ಯದರ್ಶಿ ರಮೇಶ್ ಎಸ್ ಐಲ್, ಮೊಗ್ರಾಲ್‍ಪುತ್ತೂರ್ ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲಿಕಾ ಕಾವುಗೋಳಿ, ಐಲ ಬೋವಿಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಎಸ್ ಐ ಲ್, ನೇತಾರರಾದ ರಾಧಾಕೃಷ್ಣ ರೈ ಮಡ್ವ, ರಂಜಿತ್ ಶಾರದಾ ನಗರ, ರಘು ಸಿ ಚೆರುಗೋಳಿ, ಮನೋಜ್ ಕುಮಾರ್ ಐಲ, ರತೀಶ್ ವಿ ಐಲ ಮೊದಲಾದವರು ಉಪಸ್ಥಿತರಿದ್ದರು
ಧರಣಿಯ ನಂತರ, ಬಿಜೆಪಿ ನಾಯಕರು ಮತ್ತು ಮೀನುಗಾರ ಕಾರ್ಮಿಕರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.ಮಹಿಳಾ ಸಂಘದ ಪದಾದಿಕಾರಿಗಳು ಮಹಿಳೆಯರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ *ಕೆ.ಪಿ. ವಲ್ಸರಾಜ್* ಸ್ವಾಗತಿಸಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್ ವಂದಿಸಿದರು.



