ನವದೆಹಲಿ: ಸಂಪೂರ್ಣ ಸೂರ್ಯಗ್ರಹಣ ಸಂದರ್ಭದಲ್ಲಿ ಬೆಂಗಳೂರಿನ ವಿಜ್ಞಾನಿಗಳು ಬುಧವಾರ ಅಧ್ಯಯನ ನಡೆಸಿದ್ದು, ಸೂರ್ಯನ ಪ್ರಭಾವಲಯ(ಕರೋನ) ಕುರಿತಂತೆ ತಾವು ಸಿದ್ಧಪಡಿಸಿದ ಮಾದರಿಗಳನ್ನು ಒರೆಗೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ, ಸೌರ ಕಾಂತೀಯ ಕ್ಷೇತ್ರಗಳ ಕುರಿತು ವಿಜ್ಞಾನಿಗಳು ಮತ್ತಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.
ಭೂಮಿ ಸುತ್ತ ಪರಿಭ್ರಮಿಸುವ ಉಪಗ್ರಹಗಳ ಕಾರ್ಯಾಚರಣೆ, ವಿಮಾನಯಾನ ಹಾಗೂ ಸಂವಹನ ಜಾಲಗಳ ಮೇಲೆ ಈ ಸೌರ ಕಾಂತೀಯ ಕ್ಷೇತ್ರಗಳು ಪರಿಣಾಮ ಬೀರುತ್ತವೆ. ಅವುಗಳು ಒಡ್ಡುವ ಅಪಾಯದ ತೀವ್ರತೆಯನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಅಭಿವೃದ್ಧಿಗೆ ಈ ಅಧ್ಯಯನ ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆ(ಆರ್‌ಆರ್‌ಐ)ಯ ವಿಜ್ಞಾನಿ ದಿವ್ಯೇಂದು ನಂದಿ ನೇತೃತ್ವದ ವಿಜ್ಞಾನಿಗಳ ತಂಡ ಈ ಅಧ್ಯಯನ ಕೈಗೊಂಡಿತ್ತು.
'ಕರೋನದಲ್ಲಿ ಕಾಣಿಸಿಕೊಳ್ಳುವ ಸೌರ ಮಾರುತಗಳು ಸೆಕೆಂಡಿಗೆ 400 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಈ ಸೌರ ಮಾರುತಗಳನ್ನು ನೋಡಲು ಹಾಗೂ ಕಾಂತೀಯ ಕ್ಷೇತ್ರಗಳ ಕುರಿತ ನಮ್ಮ ಮಾದರಿಗಳನ್ನು ಪರೀಕ್ಷೆಗೆ ಒಡ್ಡುವುದಕ್ಕೆ ಸೂರ್ಯಗ್ರಹಣ ಅವಕಾಶ ಒದಗಿಸುತ್ತದೆ' ಎಂದು ದಿವ್ಯೇಂದು ನಂದಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಬೆಂಗಳೂರಿನ ಭಾರತೀಯ ಖಭೌತವಿಜ್ಞಾನ ಸಂಸ್ಥೆ(ಐಐಎ), ಕೋಲ್ಕತ್ತದ ಭಾರತೀಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಬ್ರಿಟನ್‌ನ ರೀಡಿಂಗ್ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ನ್ಯಾಷನಲ್ ಸೋಲಾರ್ ಆಬ್ಸರ್ವೇಟರಿಯ ವಿಜ್ಞಾನಿಗಳು ಇರುವ ತಂಡ ಈ ಮಾದರಿಯನ್ನು ಅಭಿವೃದ್ಧಿಪಡಿಸಿದೆ.
ಸೂರ್ಯನ ವರ್ಣಮಂಡಲದ (ಕ್ರೊಮೊಸ್ಪೀಯರ್) ಅತ್ಯಂತ ಹೊರವಲಯವೇ ಕರೋನ. ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಇದನ್ನು ನೋಡಲು ಸಾಧ್ಯ. ಗ್ರಹಣದ ವೇಳೆ ಚಂದ್ರನ ನೆರಳು 2 ನಿಮಿಷ 18 ಸೆಕೆಂಡು ಸೂರ್ಯನನ್ನು ಮರೆಮಾಚುವುದರಿಂದ ಕರೋನವನ್ನು ನೋಡಲು ಸಾಧ್ಯವಾಗಲಿದೆ.
ಬುಧವಾರದ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುತ್ತಿರಲಿಲ್ಲ. ಸ್ಪೇನ್‌ನಲ್ಲಿ ಪೂರ್ಣವಾಗಿ ಕಾಣಿಸಿದ್ದರೆ, ಪಶ್ಚಿಮ ಯುರೋಪ್, ಆಫ್ರಿಕಾದ ವಾಯವ್ಯ ಭಾಗದ ಕೆಲ ಪ್ರದೇಶಗಳು ಹಾಗೂ ಅಮೆರಿಕದ ಕೆಲ ಭಾಗಗಳಲ್ಲಿ ಭಾಗಶಃ ಗೋಚರವಾಗಿತ್ತು.

