ವಾಷಿಂಗ್ಟನ್: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಭೂಕಂಪ ಕಾರಣವಲ್ಲ, ದೊಡ್ಡ ಪ್ರಮಾಣದಲ್ಲಿ ಹಿಮಬಂಡೆಗಳು ಕುಸಿದು ಪ್ರವಾಹ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್‌ಜಿಎಸ್) ಹೇಳಿದೆ.
ಸ್ಥಳೀಯ ಭೂಕಂಪ ಮಾಪನ ಕೇಂದ್ರಗಳಲ್ಲಿ ದಾಖಲಾದ ತರಂಗಗಳು, ಉಪಗ್ರಹ ಚಿತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಯುಎಸ್‌ಜಿಎಸ್, ನೇಪಾಳ-ಟಿಬೆಟ್ ಗಡಿಯಲ್ಲಿ ಭಾರಿ ಗಾತ್ರದ ಹಿಮಬಂಡೆಗಳು ಕುಸಿದು ಕಣಿವೆಗೆ ಅಪ್ಪಳಿಸಿದಾಗ ಭೂಕಂಪದಷ್ಟೇ ತೀವ್ರತೆಯ ಕಂಪನ ದಾಖಲಾಗಿದೆ ಎಂದು ಹೇಳಿದೆ.
ಅಸಲಿಗೆ ಭೂಕಂಪದಿಂದ ಹಿಮಬಂಡೆಗಳು ಉರುಳಿಲ್ಲ, ಬದಲಿಗೆ ಹಿಮಬಂಡೆಗಳು ಕುಸಿದಾಗ 5.2ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. ಕಣಿವೆಯ ಮೂಲಕ ಹಿಮರಾಶಿ, ಕಲ್ಲು, ಮಣ್ಣು ಮತ್ತು ಅವಶೇಷಗಳು ವೇಗವಾಗಿ ಹರಿದು ಭೋಟೆ ಕೋಶಿ ನದಿಯ ಉಪನದಿ ಲೆಂಡೆಯಲ್ಲಿ ದಿಢೀರ್ ಪ್ರವಾಹ ಉಂಟಾಯಿತು ಎಂದು ಸಂಸ್ಥೆ ವಿಶ್ಲೇಷಿಸಿದೆ.
ಟಿಬೆಟ್ ಗಡಿಯಲ್ಲಿ ಸಂಭವಿಸಿದ 4.4 ತೀವ್ರತೆಯ ಭೂಕಂಪದಿಂದ ಹಿಮಬಂಡೆಗಳು ಕುಸಿದು ಪ್ರವಾಹ ಉಂಟಾಯಿತು ಎಂದು ನೇಪಾಳದ ವಿಪತ್ತು ನಿರ್ವಹಣೆ ಪ್ರಾಧಿಕಾರ ಬುಧವಾರ ಹೇಳಿತ್ತು.
5,200 ಮೀಟರ್ ಎತ್ತರದಿಂದ ಉರುಳಿದ ಹಿಮದ ಬಂಡೆ
ಉಪಗ್ರಹ ಚಿತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂಸ್ವರೂಪ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡೇನಿಯಲ್ ಶ್ಯೂಗರ್ ಅವರು, 5,200 ಮೀಟರ್ ಎತ್ತರದಿಂದ ಭಾರಿ ಹಿಮಬಂಡೆಯು ಕಣಿವೆಗೆ ಉರುಳಿದ್ದರಿಂದ ದಿಢೀರ್ ಪ್ರವಾಹ ಉಂಟಾಗಿದೆ ಎಂದು ಹೇಳಿದ್ದಾರೆ.
ತಾಪಮಾನ ಏರಿಕೆ, ಬಲವಾದ ಗಾಳಿ, ಮಳೆ ಸೇರಿದಂತೆ ಹವಾಮಾನದಲ್ಲಿನ ಸಣ್ಣ ಬದಲಾವಣೆ ಸಹ ತ್ವರಿತಗತಿಯಲ್ಲಿ ಹಿಮ ಕರಗುವಿಕೆಗೆ ಕಾರಣವಾಗುತ್ತದೆ. ಮೇಲ್ಮೈ ಕರಗುತ್ತಿದ್ದಂತೆ ಸಡಿಲಗೊಳ್ಳುವ ಹಿಮದ ಬಂಡೆಗಳು ಕಣಿವೆಗೆ ಉರುಳಿದಾಗ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ' ಎಂದು ಅವರು ಹೇಳಿದ್ದಾರೆ.

