ಬೀಜಿಂಗ್: ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ನೈಸರ್ಗಿಕ ತಡೆಗೋಡೆ(ಜಿಯಲಾಜಿಕಲ್ ಡಿಸಾಸ್ಟರ್ ಡ್ಯಾಮ್) ಒಡೆದಿದ್ದೇ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಲು ಕಾರಣ ಎಂಬ ಆರೋಪಕ್ಕೆ ಚೀನಾ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಬುಧವಾರ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿಗಳಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ನೇಪಾಳದ ನುವಾಕೋಟ್, ಧಾಡಿಂಗ್ ಜಿಲ್ಲೆಯಲ್ಲಿ ಅಪಾರ ಹಾನಿ ಮಾಡಿತ್ತು.
ಪ್ರವಾಹದಲ್ಲಿ 359ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 1300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಈ ನಡುವೆ, ಹಠಾತ್ ಪ್ರವಾಹಕ್ಕೆ ಚೀನಾ ಕಾರಣವೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಚೀನಾಕ್ಕೆ ಸೇರಿದ ಟಿಬೆಟ್ ಭಾಗದಲ್ಲಿ ನೈಸರ್ಗಿಕ ತಡೆಗೋಡೆ ಒಡೆದಿದ್ದೇ ಅಪಾರ ಪ್ರಮಾಣದ ನೀರು ನೇಪಾಳದತ್ತ ಹರಿದು ಬರಲು ಕಾರಣವಾಗಿದೆ ಎಂದು ಹೇಳಲಾಗಿತ್ತು.
ಈ ವರದಿಗಳನ್ನು ತಳ್ಳಿಹಾಕಿರುವ ಚೀನಾ, 'ಮುನ್ನೆಚ್ಚರಿಕೆ ನೀಡುವಲ್ಲಿ ವಿಫಲವಾದ ಕಾರಣದಿಂದಲೇ ನೇಪಾಳದಲ್ಲಿ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ' ಎಂದು ಹೇಳಿದೆ.
'ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೂ ಚೀನಾಕ್ಕೂ ಯಾವುದೇ ಸಂಬಂಧವಿಲ್ಲ. ಆ ಭಾಗದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ನೀರ್ಗಲ್ಲುಗಳು ಸ್ಪೋಟಗೊಂಡು ಈ ಅನಾಹುತ ನಡೆದಿದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದಕ್ಕಿಂತ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಸಹಕಾರ ನೀಡುವುದು ಮುಖ್ಯ' ಎಂದು ನೇಪಾಳದಲ್ಲಿರುವ ಚೀನಾ ರಾಯಭಾರಿ ಕಚೇರಿ ತನ್ನ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದೆ.
'ಆರೋಪಗಳು ಜೀವಗಳನ್ನು ಉಳಿಸುವುದಿಲ್ಲ, ಸಹಕಾರ ಮಾತ್ರ ಜೀವಗಳನ್ನು ಉಳಿಸಬಲ್ಲದು' ಎಂದು ತಿಳಿಸಿದೆ.

