ವಾಷಿಂಗ್ಟನ್: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ 'ಜಾಗತಿಕ ಏಕತಾ ಆಚರಣೆ' ಕಾರ್ಯಕ್ರಮವನ್ನು ಆಯೋಜಿಸಿರುವ 'ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್' (AHED) ಸಂಘಟನೆಯ 'ಎಕ್ಸ್' ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 29ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಇನ್ಫೋಸಿಸ್ ಥಿಯೇಟರ್‌ನಲ್ಲಿ 'ಜಾಗತಿಕ ಏಕತಾ ಆಚರಣೆ' ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಮೋಹನ್ ಭಾಗವತ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಖಾತೆ ಅಮಾನತುಗೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಸಂಘಟನೆ, ಇದು ತಾಂತ್ರಿಕ ಅಥವಾ ಕಣ್ತಪ್ಪಿನಿಂದ ಸಂಭವಿಸಿರಬಹುದೆಂದು ಹೇಳಿದೆ.
'ನಾವು ಸಾಮಾಜಿಕ ಮಾಧ್ಯಮದ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪೋಸ್ಟ್‌ಗಳನ್ನು ಪ್ರಕಟಿಸಿಲ್ಲ. ಜಾಗತಿಕ ಶಾಂತಿ, ಏಕತೆ, ಸಾಮರಸ್ಯ ಹಾಗೂ ಅಂತರ್‌ಸಂಸ್ಕೃತಿ ಸಂವಾದವನ್ನು ಉತ್ತೇಜಿಸುವ ಉದ್ದೇಶದಿಂದಲೇ ಕಾರ್ಯನಿರ್ವಹಿಸುತ್ತಿದ್ದೇವೆ' ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಸಂವಾದವನ್ನೂ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ ವೇಳೆ, ಮೋಹನ್ ಭಾಗವತ್ ಅವರಿಗೆ ಕಾರ್ಯಕ್ರಮದ ಆಹ್ವಾನ ನೀಡಿರುವುದನ್ನು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಆಯೋಗವೊಂದು ವಿರೋಧ ವ್ಯಕ್ತಪಡಿಸಿದೆ. ಅವರಿಗೆ ನೀಡಿರುವ ವೀಸಾವನ್ನು ರದ್ದುಗೊಳಿಸುವಂತೆ ಟ್ರಂಪ್ ಆಡಳಿತವನ್ನು ಒತ್ತಾಯಿಸಿದೆ.

